HomeKarnatakaಸ್ನೇಹಿತನ ಗೆಳತಿಯನ್ನು ಕಾಲ್ ಗರ್ಲ್ ಎಂದು ಭಾವಿಸಿ ಅತ್ಯಾಚಾರ: ಆರೋಪಿಗಳನ್ನು ಕಿಡ್ನ್ಯಾಪ್ ಮಾಡಿ ಹತ್ಯೆಗೈದು ಆತ್ಮಹತ್ಯೆ...

ಸ್ನೇಹಿತನ ಗೆಳತಿಯನ್ನು ಕಾಲ್ ಗರ್ಲ್ ಎಂದು ಭಾವಿಸಿ ಅತ್ಯಾಚಾರ: ಆರೋಪಿಗಳನ್ನು ಕಿಡ್ನ್ಯಾಪ್ ಮಾಡಿ ಹತ್ಯೆಗೈದು ಆತ್ಮಹತ್ಯೆ ಎಂದು ಕಥೆ ಕಟ್ಟಲು ಸಂಚು ನಡೆಸಿದ ಸಂತ್ರಸ್ತೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಘೋರ ಕೃತ್ಯ ಬೆಳಕಿಗೆ ಬಂದಿದೆ. ಸ್ನೇಹಿತನ ಗರ್ಲ್ ಫೆಂಡ್ ಕಾಲ್ ಗರ್ಲ್ ಎಂದು ಭಾವಿಸಿ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದ್ದು, ಸೇಡು ತೀರಿಸಿಕೊಳ್ಳಲು ಸಂತ್ರಸ್ತೆ ಆರೋಪಿಗಳನ್ನು ಕಿಡ್ನ್ಯಾಪ್ ಮಾಡಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಸಂಚು ರೂಪಿಸಿದ್ದ ಘಟನೆ ನಡೆದಿದೆ.

ಮೂವರು ಸ್ನೇಹಿತರು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ 2 ಬಿಹೆಚ್​ಕೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಅವರಲ್ಲೊಬ್ಬ ಊರಿಗೆ ಹೋಗಿದ್ದಾಗ ಆತನ ಸ್ನೇಹಿತ ಹಾಗೂ ಅವನ ಗರ್ಲ್ ಫ್ರೆಂಡ್ ಬೆಂಗಳೂರಿಗೆ ಬಂದಿದ್ದಾರೆ. ಬಂದವರೇ ಸ್ನೇಹಿತನ ಸಲಹೆಯಂತೆ ಆತನ ಮನೆಗೆ ಬಂದು ಉಳಿದುಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಇನ್ನಿಬ್ಬರು ಆತ ಕಾಲ್ ಗರ್ಲ್ ಅನ್ನು ಕರೆದುಕೊಂಡು ಬಂದಿದ್ದಾನೆಂದು ಭಾವಿಸಿ ಮಧ್ಯ ರಾತ್ರಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಂಧ್ರ ಪ್ರದೇಶದ ಮದನಪಲ್ಲಿಯ ಮಹೇಂದ್ರ, ತರುಣ್ ಮತ್ತು ಮಂಜು ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾರತ್ತಹಳ್ಳಿಯಲ್ಲಿ ಎರಡು ಬೆಡ್‌ರೂಮ್‌ಗಳ ಮನೆಯನ್ನು ಬಾಡಿಗೆಗೆ ಪಡೆದು ಒಟ್ಟಿಗೆ ವಾಸವಾಗಿದ್ದರು. ಕಳೆದ ಶನಿವಾರ ಮಂಜು ತನ್ನ ಊರಾದ ಆಂಧ್ರಪ್ರದೇಶದ ಮದನಪಲ್ಲಿಗೆ ತೆರಳಿದ್ದ. ಈ ವೇಳೆ ಬೆಂಗಳೂರಿನಲ್ಲಿದ್ದ ಮಂಜುವಿನ ಸ್ನೇಹಿತ ರಾಜ್‌ಕುಮಾರ್ ಕರೆ ಮಾಡಿ, ತನ್ನ ಪ್ರೇಯಸಿಯೊಂದಿಗೆ ಒಂದು ದಿನ ಉಳಿದುಕೊಳ್ಳಲು ರೂಮ್ ಬೇಕೆಂದು ಕೇಳಿದ್ದ. ತಾನು ಊರಿಗೆ ಬಂದಿರುವುದಾಗಿ ತಿಳಿಸಿದ ಮಂಜು, ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತರನ್ನು ಸಂಪರ್ಕಿಸಿ ರೂಮ್‌ನ ಕೀ ಪಡೆದು ಉಳಿದುಕೊಳ್ಳುವಂತೆ ಹೇಳಿದ್ದ.

ಮಂಜು ನೀಡಿದ ಸಲಹೆಯಂತೆ ರಾಜ್‌ಕುಮಾರ್ ಮತ್ತು ಯುವತಿ ಮನೆಗೆ ಬಂದಿದ್ದರು. ಒಂದು ರೂಮ್‌ನಲ್ಲಿ ಇಬ್ಬರು ಉಳಿದುಕೊಂಡಿದ್ದರೆ, ಮತ್ತೊಂದು ರೂಮ್‌ನಲ್ಲಿ ಮಹೇಂದ್ರ ಮತ್ತು ತರುಣ್ ಇದ್ದರು. ಈ ವೇಳೆ ಯುವತಿಯನ್ನು ಕಾಲ್‌ಗರ್ಲ್ ಇರಬಹುದೆಂದು ಮಹೇಂದ್ರ ಮತ್ತು ತರುಣ್ ಭಾವಿಸಿದ್ದರು ಎನ್ನಲಾಗಿದೆ.

ಪೊಲೀಸರಿಗೆ ನೀಡಲಾದ ಮಾಹಿತಿಯ ಪ್ರಕಾರ, ಮಹೇಂದ್ರ ಮತ್ತು ತರುಣ್ ಮದ್ಯದ ಅಮಲಿನಲ್ಲಿ ತಡರಾತ್ರಿ ರಾಜ್‌ಕುಮಾರ್‌ನನ್ನು ಬಲವಂತವಾಗಿ ಮತ್ತೊಂದು ರೂಮ್‌ಗೆ ಎಳೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಬಳಿಕ ಮಹೇಂದ್ರ ಯುವತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ.

ರಾತ್ರಿ ಸುಮಾರು 1.30ರಿಂದ ಬೆಳಗಿನ ಜಾವ 4.30ರವರೆಗೆ ಅತ್ಯಾಚಾರ ಎಸಗಿರುವ ಆರೋಪ ವ್ಯಕ್ತವಾಗಿದೆ. ಭಾನುವಾರ ಬೆಳಗ್ಗೆ ಯುವತಿಗೆ ಬೆದರಿಕೆ ಹಾಕಿ ಅಲ್ಲಿಂದ ಕಳುಹಿಸಲಾಗಿತ್ತು. ನಡೆದ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಯುವತಿ ಆರಂಭದಲ್ಲಿ ಯಾರಿಗೂ ವಿಷಯ ತಿಳಿಸಿರಲಿಲ್ಲ. ಆದರೆ, ತನಗಾದ ಅನ್ಯಾಯವನ್ನು ನೆನೆದು ನೊಂದಿದ್ದ ಆಕೆ, ರಾಜ್‌ಕುಮಾರ್ ಜೊತೆ ಸೇರಿ ಆರೋಪಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಳು.

ಬಳಿಕ ರಾಜ್‌ಕುಮಾರ್ ನಡೆದ ಘಟನೆಯನ್ನು ತನ್ನ ಸ್ನೇಹಿತ ಮಂಜುವಿಗೆ ತಿಳಿಸಿದ್ದ. ವಿಷಯ ತಿಳಿದ ಮಂಜು ಕೂಡ ಆಘಾತಕ್ಕೊಳಗಾಗಿದ್ದ. ಈ ಬೆಳವಣಿಗೆಯ ನಂತರ ಯುವತಿ ಮತ್ತು ರಾಜ್‌ಕುಮಾರ್ ಮದನಪಲ್ಲಿಯ ಪರಿಚಯಸ್ಥ ಯುವಕರ ನೆರವು ಪಡೆದುಕೊಳ್ಳಲು ಮುಂದಾಗಿದ್ದರು.

ಸೇಡು ತೀರಿಸಿಕೊಳ್ಳುವುದಕ್ಕಾಗಿ ಲೋಕನಾಥ್ ಮತ್ತು ಸುಹೇಲ್ ಎಂಬವರ ನೇತೃತ್ವದಲ್ಲಿ ಯುವಕರ ತಂಡವೊಂದು ಸಿದ್ಧವಾಗಿತ್ತು. ಮಂಜು ಅದೇ ಮನೆಯಲ್ಲಿ ಉಳಿದುಕೊಂಡು ಮಹೇಂದ್ರ ಮತ್ತು ತರುಣ್‌ ಅವರ ಚಲನವಲನಗಳ ಬಗ್ಗೆ ತಂಡಕ್ಕೆ ಮಾಹಿತಿ ನೀಡುತ್ತಿದ್ದ. ಬುಧವಾರ ಬೆಳಗಿನ ಜಾವ ಸುಮಾರು 2.30ರ ವೇಳೆಗೆ ತಂಡ ಮನೆಗೆ ಬಂದು ಮಹೇಂದ್ರನನ್ನು ಅಪಹರಿಸಿತ್ತು. ಆತನ ಮೊಬೈಲ್ ಫೋನ್‌ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಇತ್ತ ನೈಟ್ ಶಿಫ್ಟ್ ಮುಗಿಸಿ ಕಚೇರಿಯಿಂದ ವಾಪಸಾಗುತ್ತಿದ್ದ ತರುಣ್‌ನನ್ನು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅಪಹರಿಸಲಾಗಿತ್ತು. ಐದು ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ಇಬ್ಬರನ್ನೂ ಕರೆದೊಯ್ದಿದ್ದರು.

ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರ ಮೇಲೂ ಹಲ್ಲೆ ನಡೆಸಲಾಗಿತ್ತು. ತರುಣ್‌ನ ಮೊಬೈಲ್‌ನಿಂದ ಮಹೇಂದ್ರನ ತಂದೆಗೆ ಕರೆ ಮಾಡಿದ ಆರೋಪಿಗಳು, ನಿಮ್ಮ ಮಗನನ್ನು ಅಪಹರಿಸಿದ್ದೇವೆ ಎಂದು ತಿಳಿಸಿ, ಹೊಸಕೋಟೆ ಟೋಲ್‌ ಬಳಿ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮಹೇಂದ್ರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.

ಮಗನ ಅಪಹರಣದ ಬಗ್ಗೆ ತಿಳಿದ ಮಹೇಂದ್ರನ ತಂದೆ ಆಂಧ್ರಪ್ರದೇಶದಿಂದ ಮಾರತ್ತಹಳ್ಳಿಗೆ ಬಂದು ತಕ್ಷಣ 112ಕ್ಕೆ ಕರೆ ಮಾಡಿದ್ದರು. ಪೊಲೀಸರು ಅವರನ್ನು ಸಂಪರ್ಕಿಸಿ ವಿಚಾರಣೆ ಆರಂಭಿಸಿದ್ದರು. ಈ ಮಧ್ಯೆಯೂ ಆರೋಪಿಗಳು ಕರೆ ಮಾಡಿ, ಬ್ಯಾಂಕ್ ತೆರೆಯಲು ತಡವಾಗುತ್ತದೆ ಎಂಬ ನೆಪದಲ್ಲಿ ಹಣದ ವ್ಯವಸ್ಥೆ ಮಾಡಲು ಕಾಲಾವಕಾಶ ನೀಡಿದ್ದರು.

ಪೊಲೀಸರು ಹಲವು ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದ್ದರು. ಆರೋಪಿಗಳು ಹಲ್ಲೆ ನಡೆಸುವ ಶಬ್ದವನ್ನು ಫೋನ್‌ನಲ್ಲಿ ಕೇಳಿಸುವ ಮೂಲಕ ಕುಟುಂಬದವರನ್ನು ಬೆದರಿಸುತ್ತಿದ್ದರು ಎಂದು ತಿಳಿದುಬಂದಿದೆ. ಮಧ್ಯಾಹ್ನದ ವೇಳೆಗೆ ಆರೋಪಿಗಳು ನಾಗರಭಾವಿ ಕಡೆಗೆ ತೆರಳಿದ್ದರು. ಇತ್ತ ಮಂಜು ಏನೂ ಗೊತ್ತಿಲ್ಲದವನಂತೆ ಕಚೇರಿಗೆ ಕೆಲಸಕ್ಕೆ ತೆರಳಿದ್ದ. ಪೊಲೀಸರು ಆತನನ್ನು ಕಚೇರಿಯಿಂದ ಕರೆಸಿಕೊಂಡು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ವಿವರಗಳು ಹೊರಬಂದವು ಎಂದು ನೀಡಲಾದ ಮಾಹಿತಿ ತಿಳಿಸುತ್ತದೆ. ಪೊಲೀಸರು , ನಾಗರಭಾವಿ ಕಡೆಗೆ ತೆರಳಿದ್ದ ಬೈಕ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ನಾಗರಭಾವಿಯ ಮನೆಯೊಂದರ ಬಗ್ಗೆ ಅನುಮಾನಗೊಂಡ ಪೊಲೀಸರು ಅಲ್ಲಿ ಪರಿಶೀಲನೆ ನಡೆಸಿದಾಗ ಇಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿತ್ತು. ಯುವತಿಯೂ ಸ್ಥಳದಲ್ಲಿದ್ದಳು ಎಂದು ವರದಿಯಾಗಿದೆ. ಪೊಲೀಸರು ಸ್ಥಳದಲ್ಲೇ ಆರು ಮಂದಿಯನ್ನು ಬಂಧಿಸಿದ್ದರು.

ಬಂಧಿತರ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಂದಿದೆ. ಮಹೇಂದ್ರನನ್ನು ಕೊಂದು ನಿರ್ಜನ ಪ್ರದೇಶದಲ್ಲಿ ಎಸೆಯಲು ಹಾಗೂ ತರುಣ್‌ನಿಂದ ಡೆತ್ ನೋಟ್ ಬರೆಸಿ ಆತನನ್ನು ನೇಣು ಬಿಗಿದ ಸ್ಥಿತಿಯಲ್ಲಿ ಇರಿಸುವ ಮೂಲಕ ಆತ್ಮಹತ್ಯೆಯಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳದಲ್ಲಿ ಆರು ಮಂದಿಯನ್ನು ಬಂಧಿಸಿದ ಬಳಿಕ, ಉಳಿದ ಐವರನ್ನು ಬಂಧಿಸಿ ಕರೆತರಲಾಗಿದೆ. ಒಟ್ಟಾರೆ ಕಿಡ್ನ್ಯಾಪ್ ಪ್ರಕರಣದಲ್ಲಿ 11 ಮಂದಿ ಬಂಧನಕ್ಕೊಳಗಾಗಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular