ಮಂಡ್ಯ: ಕರ್ತವ್ಯಲೋಪ, 1.5 ಕೋಟಿ ರೂ.ಗೂ ಅಧಿಕ ಹಣ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಮದ್ದೂರು ತಾಲೂಕಿನ ಆತಗೂರು ಗ್ರಾಮ ಪಂಚಾಯಿತಿ ಪಿಡಿಒ ಶಶಿಧರ್ ಅವರನ್ನು ಅಮಾನತು ಮಾಡಲಾಗಿದೆ.
ಪಿಡಿಒ ಶಶಿಧರ್ ಅವರನ್ನು ಅಮಾನತುಗೊಳಿಸಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಆದೇಶ ಹೊರಡಿಸಿದ್ದಾರೆ. ಆತಗೂರು ಮತ್ತು ತಗ್ಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ. 15ನೇ ಸಾಲಿನ ಹಣಕಾಸು ಯೋಜನೆ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪಿಡಿಒ ಶಶಿಧರ್ ವಿರುದ್ಧ ಹಣ ದುರ್ಬಳಕೆ ಆರೋಪದ ಬಗ್ಗೆ ದೂರು ದಾಖಲಾಗಿದ್ದು, ದೂರು ಆಧರಿಸಿ ಜಿಲ್ಲಾ ಪಂಚಾಯಿತಿ ಸಿಇಒ ತನಿಖಾ ತಂಡ ರಚಿಸಿದ್ದರು. ಹಣ ಬಳಕೆಗೆ ಸಂಬಂಧಿಸಿದಂತೆ ಡಿಸಿ ಬಿಲ್ ಗಳ ಕಡತ ಪರಿಶೀಲನೆ ನಡೆಸಿದ್ದಾರೆ. ಬಿಲ್ ಗಳಲ್ಲಿ ತಪ್ಪುಗಳು ಕಂಡುಬಂದಿರುವುದರ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತನಿಕೆಯ ನಂತರ ಇಲಾಖೆ ವಿಚಾರಣೆ ಬಾಕಿ ಇರಿಸಿ ಶಶಿಧರ್ ಅವರನ್ನು ಅಮಾನತು ಮಾಡಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಸೇವೆಯಿಂದ ಅವರನ್ನು ಅಮಾನತು ಮಾಡಲಾಗಿದೆ. ಈ ಹಿಂದೆಯೂ ಹಣ ದುರ್ಬಳಕೆ ಆರೋಪದಡಿ ಶಶಿಧರ್ ಅಮಾನತುಗೊಂಡಿದ್ದರು. ಹಲಗೂರು ಪಿಡಿಒ ಆಗಿದ್ದಾಗ ಹಣ ದುರ್ಬಳಕೆ ಹಿನ್ನೆಲೆ ಅಮಾನತಾಗಿದ್ದರು. ಈಗ ಮತ್ತೊಮ್ಮೆ ಹಣ ದುರ್ಬಳಕೆ ಆರೋಪದಡಿ ಶಶಿಧರ್ ಅವರನ್ನು ಅಮಾನತು ಮಾಡಲಾಗಿದೆ.

