ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಪಂಚ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆ ಗಡುವು ವಿಸ್ತರಿಸಲಾಗಿದೆ.
ಈ ಹಿಂದೆ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪರಿಶೀಲನೆಗೆ ಜುಲೈ 1 ರಿಂದ ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಲಾಗಿತ್ತು. ನಿರೀಕ್ಷೆಯಂತೆ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ಒಂದು ತಿಂಗಳ ಕಾಲ ಗಡುವು ವಿಸ್ತರಿಸಲಾಗಿದೆ.
ರಾಜ್ಯದ 6 ಎಸ್ಕಾಂ ಗಳ ವ್ಯಾಪ್ತಿಯಲ್ಲಿ ಸುಮಾರು 2.05 ಕೋಟಿ ಗೃಹ ಬಳಕೆ ಉದ್ದೇಶದ ವಿದ್ಯುತ್ ಸಂಪರ್ಕಗಳಿದ್ದು, ಇವುಗಳಲ್ಲಿ 1.65 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯಕ್ಕೆ ಹೆಸರು ನೋಂದಾಯಿಸಿದ್ದವು. ಆಗಸ್ಟ್ 31ರ ಅಂತ್ಯಕ್ಕೆ 1.17 ಕೋಟಿ ಫಲಾನುಭವಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನೂ 47 ಲಕ್ಷ ಕುಟುಂಬಗಳ ವಿದ್ಯುತ್ ಸಂಪರ್ಕ ಪರಿಶೀಲನೆ ಬಾಕಿ ಇದೆ. ಹೀಗಾಗಿ ಗಡುವು ವಿಸ್ತರಿಸಲಾಗಿದೆ.
ಈಗಾಗಲೇ ನಡೆಯುತ್ತಿರುವ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ವಿಸ್ತರಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

