ಟಾಲಿವುಡ್ ತಾರೆ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿಶ್ವಾದ್ಯಂತ ಭಾರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ನಂದಿನಿ ರೆಡ್ಡಿ ನಿರ್ದೇಶನದ ಹಾಗೂ ರಾಜ್ ನಿಡಿಮೋರು ಸೃಜಿಸಿರುವ ಈ ಫ್ಯಾಮಿಲಿ ಆಕ್ಷನ್ ಡ್ರಾಮಾ ಸಿನಿಮಾ ಈಗಾಗಲೇ ಜಾಗತಿಕವಾಗಿ 80 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಕೆ ಮಾಡಿದೆ.
ಇದೀಗ ಈ ಸಿನಿಮಾ ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲು ಸ್ಥಾಪಿಸುವ ಹೊಸ್ತಿಲಲ್ಲಿದೆ. ಸದ್ಯಕ್ಕೆ ಅಲ್ಲಿ 1.8 ಮಿಲಿಯನ್ ಡಾಲರ್ ಗಳಿಕೆ ಮಾಡಿರುವ ಈ ಚಿತ್ರ, ಇನ್ನು ಕೇವಲ 0.2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದರೆ ಒಟ್ಟಾರೆ 2 ಮಿಲಿಯನ್ ಡಾಲರ್ ಕ್ಲಬ್ ಸೇರಲಿದೆ. ಇದು ಸಮಂತಾ ಅವರ ನಟನಾ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಸಾಧನೆಯಾಗಲಿದೆ.
ಇತ್ತೀಚಿನ ದಿನಗಳಲ್ಲೂ ಈ ಚಿತ್ರದ ಟಿಕೆಟ್ ಮಾರಾಟ ಉತ್ತಮವಾಗಿಯೇ ಸಾಗುತ್ತಿದ್ದು, ಬುಕ್‌ಮೈಶೋ ಆಪ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 25 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಈ ವಾರ ಕೆಲವು ಹೊಸ ತೆಲುಗು ಸಿನಿಮಾಗಳು ತೆರೆಗೆ ಬರುತ್ತಿದ್ದು, ಅವುಗಳ ಪೈಪೋಟಿ ನಡುವೆಯೂ ಸಮಂತಾ ಅವರ ‘ಮಾ ಇಂಟಿ ಬಂಗಾರಂ’ ತನ್ನ ಅಬ್ಬರವನ್ನು ಹೇಗೆ ಮುಂದುವರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

