HomeInternationalBREAKING : ಈಜಿಪ್ಟ್‌ನಲ್ಲಿ ಭೀಕರ ರೈಲು ಅಪಘಾತ; 7 ಮಂದಿ ಸಾವು, 125ಕ್ಕೂ ಹೆಚ್ಚು ಜನರಿಗೆ...

BREAKING : ಈಜಿಪ್ಟ್‌ನಲ್ಲಿ ಭೀಕರ ರೈಲು ಅಪಘಾತ; 7 ಮಂದಿ ಸಾವು, 125ಕ್ಕೂ ಹೆಚ್ಚು ಜನರಿಗೆ ಗಾಯ!

ಕೈರೋ: ಈಜಿಪ್ಟ್ ರಾಜಧಾನಿ ಕೈರೋ ನಗರದ ಹೊರವಲಯದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 125ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾನುವಾರ (ನವೆಂಬರ್ 8) ಗಿಜಾ ಪ್ರಾಂತ್ಯದ ಅಲ್-ಅಯ್ಯತ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಗಿಜಾದಿಂದ ಫಯೂಮ್‌ಗೆ ತೆರಳುತ್ತಿದ್ದ ರೈಲು, ಕೈರೋದಿಂದ ದಕ್ಷಿಣ ಈಜಿಪ್ಟ್‌ನ ಅಸ್ವಾನ್‌ಗೆ ಪ್ರಯಾಣಿಸುತ್ತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಸ್ವಾನ್‌ಗೆ ತೆರಳುತ್ತಿದ್ದ ರೈಲು ಹಳಿ ತಪ್ಪಿ ಪಕ್ಕದ ಗ್ರಾಮೀಣ ರಸ್ತೆಗೆ ಉರುಳಿದೆ.

ಸ್ಥಳಕ್ಕೆ 70ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. 70ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕ್ರೇನ್‌ಗಳ ನೆರವಿನಿಂದ ಹಳಿ ತಪ್ಪಿದ ಬೋಗಿಗಳನ್ನು ತೆರವುಗೊಳಿಸುವ ಕಾರ್ಯವೂ ನಡೆದಿದೆ.

ಅಪಘಾತದ ತೀವ್ರತೆಗೆ ಹಲವು ಬೋಗಿಗಳು ಮಗುಚಿಬಿದ್ದಿದ್ದು, ಅವುಗಳೊಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಸ್ಥಳೀಯರು, ರಕ್ಷಣಾ ಸಿಬ್ಬಂದಿ ಹಾಗೂ ರೈಲ್ವೆ ಕಾರ್ಮಿಕರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಬೋಗಿಗಳ ಅಡಿಯಲ್ಲಿ ಸಿಲುಕಿದ್ದ ಪ್ರಯಾಣಿಕರು

ಅಪಘಾತವನ್ನು ಕಣ್ಣಾರೆ ಕಂಡ 31 ವರ್ಷದ ಅಬ್ದೆಲ್ ವಹೆದ್ ಮೊಹಮ್ಮದ್ ಮಾತನಾಡಿ, ಮಧ್ಯಾಹ್ನ ಸುಮಾರು 1:30ರ ವೇಳೆಗೆ ಅಪಘಾತ ಸಂಭವಿಸಿದೆ. ಅಸ್ವಾನ್‌ಗೆ ತೆರಳುತ್ತಿದ್ದ ರೈಲು ನಿಂತಿದ್ದಾಗ ಫಯೂಮ್‌ಗೆ ಹೋಗುತ್ತಿದ್ದ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಬೋಗಿಗಳು ಮಗುಚಿಬಿದ್ದಿವೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಅಹ್ಮದ್ ಮೂಸಾ ಪ್ರಕಾರ, ಮಗುಚಿಬಿದ್ದ ಬೋಗಿಯೊಳಗೆ ಹಲವರು ಒಬ್ಬರ ಮೇಲೊಬ್ಬರು ಬಿದ್ದಿದ್ದರು. ರಕ್ಷಣಾ ಸಿಬ್ಬಂದಿ ಬೋಗಿಯ ಕೆಳಭಾಗವನ್ನು ಅಗೆದು ಪ್ರಯಾಣಿಕರನ್ನು ಹೊರತೆಗೆಯಲು ಪ್ರಯತ್ನಿಸಿದರು. ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿರುವುದನ್ನು ತಾವು ಕಂಡಿದ್ದಾಗಿ ಅವರು ಹೇಳಿದ್ದಾರೆ.

ತುರ್ತು ತನಿಖೆಗೆ ಅಧ್ಯಕ್ಷರ ಆದೇಶ

ಘಟನೆ ಕುರಿತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರ್ಲಕ್ಷ್ಯ ತೋರಿರುವುದು ತನಿಖೆಯಲ್ಲಿ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಹಾಗೂ ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನಗಳು ಮುಂದುವರಿದಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular