ದೇಶಾದ್ಯಂತ ಜಾರಿಯಲ್ಲಿರುವ E20 (20% ಎಥೆನಾಲ್ ಮಿಶ್ರಣ) ಯೋಜನೆ ಇನ್ನೂ ಪ್ರಯೋಗದ ಹಂತದಲ್ಲಿದ್ದು, ಇದರ ನೈಜ ಪರಿಣಾಮ ಮುಂದಿನ ವರ್ಷಕ್ಕೆ ಸ್ಪಷ್ಟವಾಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಈ ಮಾಹಿತಿ ನೀಡಿದ್ದು, ಎಥೆನಾಲ್ ಮಿಶ್ರಣ ಯೋಜನೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.
ದೇಶದಲ್ಲಿ ಪೆಟ್ರೋಲ್‌ಗೆ 20 ಶೇಕಡಾ ಎಥೆನಾಲ್ ಮಿಶ್ರಣ (E20) ಯೋಜನೆ ಇನ್ನೂ ಪ್ರಯೋಗದ ಹಂತದಲ್ಲಿದ್ದು, ಇದರ ಸಂಪೂರ್ಣ ಪರಿಣಾಮ ಮುಂದಿನ ವರ್ಷಕ್ಕೆ ಸ್ಪಷ್ಟವಾಗಲಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಕುರಿತು ನಡೆಯುತ್ತಿರುವ ವ್ಯಾಪಕ ಚರ್ಚೆಗಳ ನಡುವೆಯೇ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ. ಇಂಧನ ಭದ್ರತೆ, ರೈತರ ಆದಾಯ ಹೆಚ್ಚಳ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಮಹತ್ವದ್ದಾಗಿದೆ ಎಂದು ಸರ್ಕಾರ ಈವರೆಗೆ ಸಮರ್ಥಿಸಿಕೊಂಡಿದೆ.
ಈ ವಿಚಾರವು 2025-26ರ ಪೂರೈಕೆ ವರ್ಷದ ಎಥೆನಾಲ್ ಹಂಚಿಕೆಗೆ ಸಂಬಂಧಿಸಿದಂತೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪವಾಯಿತು. ಈ ಅರ್ಜಿಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು BPCL ಪ್ರಶ್ನಿಸಿದೆ. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, “ಪೆಟ್ರೋಲ್‌ಗೆ 20 ಶೇಕಡಾ ಎಥೆನಾಲ್ ಮಿಶ್ರಣವು ಸರ್ಕಾರ ನಡೆಸುತ್ತಿರುವ ಒಂದು ಪ್ರಯೋಗವಾಗಿದೆ. ಇದರ ಫಲಿತಾಂಶಗಳು ಮುಂದಿನ ವರ್ಷದೊಳಗೆ ಸ್ಪಷ್ಟವಾಗಲಿವೆ” ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.ವಿಚಾರಣೆ ವೇಳೆ, ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠವನ್ನು ಏಕೆ ಸಂಪರ್ಕಿಸಿಲ್ಲ? ಎಂದು ಸುಪ್ರೀಂ ಕೋರ್ಟ್ BPCL ಅನ್ನು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ಎಥೆನಾಲ್ ಪೂರೈಕೆ ಒಪ್ಪಂದಗಳನ್ನು ಈಗಾಗಲೇ 2025ರ ಅಕ್ಟೋಬರ್‌ನಲ್ಲೇ ಅಂತಿಮಗೊಳಿಸಲಾಗಿದೆ. ಇದೇ ರೀತಿಯ ಅರ್ಜಿಗಳು ದೇಶದ ವಿವಿಧ ಹೈಕೋರ್ಟ್‌ಗಳಲ್ಲೂ ವಿಚಾರಣೆಯಲ್ಲಿವೆ. ಹೀಗಾಗಿ ಈ ಪ್ರಕರಣವು ರಾಷ್ಟ್ರೀಯ ನೀತಿಯ ಮೇಲೆಯೇ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ವಿಚಾರವನ್ನು ವಿವಿಧ ಹೈಕೋರ್ಟ್‌ಗಳಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸುವುದಕ್ಕಿಂತ, ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ (Transfer Petition) ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ವೆಂಕಟರಮಣಿ ಮನವಿ ಮಾಡಿದರು. ಅಕ್ಟೋಬರ್‌ನಲ್ಲಿ ಎಥೆನಾಲ್ ಪೂರೈಕೆ ಒಪ್ಪಂದಗಳ ನವೀಕರಣ ಪ್ರಕ್ರಿಯೆ ಆರಂಭವಾಗುವುದರಿಂದ, ಅದರ ಮೊದಲೇ ಈ ವಿಷಯದ ಬಗ್ಗೆ ಅಂತಿಮ ತೀರ್ಮಾನ ಅಗತ್ಯವಾಗಿದೆ ಎಂದು ಅವರು ವಾದಿಸಿದರು.”ಮೊದಲು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಹೋಗಿ, ನಂತರ ಮತ್ತೆ ಬೇರೆ ಹೈಕೋರ್ಟ್‌ಗಳಲ್ಲಿ ಇದೇ ವಿಚಾರ ಎದುರಿಸಬೇಕಾದರೆ ಅನಗತ್ಯ ವಿಳಂಬವಾಗುತ್ತದೆ,” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆ ಅಂತ್ಯದಲ್ಲಿ, ಸುಪ್ರೀಂ ಕೋರ್ಟ್ ಈ ಸಂಬಂಧ ನೋಟಿಸ್ ಜಾರಿ ಮಾಡಿ, ನ್ಯಾಯಾಲಯ ಪುನರಾರಂಭವಾದ ಬಳಿಕ ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದೂಡಿತು.

