ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಆರ್ ಟಿ ಒ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರ್ಟಿಒ ಇನ್ಸ್ಪೆಕ್ಟರ್ಗಳಾದ ದಿನೇಶ್ ಕುಮಾರ್, ಕಿರಣ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು ಎಂದು ಗುರುತಿಸಲಾಗಿದೆ. ಖಾಸಗಿ ವ್ಯಕ್ತಿ ರಮೇಶ್ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ನೈಸ್ ರಸ್ತೆಯಲ್ಲಿ ಓವರ್ ಲೋಡ್ ಆದ ಟ್ರಕ್ ನ್ನು ಬಿಡಲು 30,000 ರೂಪಾಯಿ ಲಂಚಕ್ಕೆ ಇವರು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅಂತೆಯೇ ಇಂದು ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಣದ ಸಮೇತ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಕಚೇರಿಯಲ್ಲಿದ್ದ ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಬಿಗಿ ಕ್ರಮ ಮುಂದುವರಿಸಿದ್ದು, ಈ ದಾಳಿಯು ಸರ್ಕಾರಿ ಕಚೇರಿಗಳಲ್ಲಿ ಲಂಚಬಾಕತನಕ್ಕೆ ಪೆಟ್ಟು ನೀಡಿದಂತಾಗಿದೆ.

