ದಾವಣಗೆರೆ : ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.ಪೀಠದಲ್ಲಿ ನಡೆದ 15 ಜನರ ಧರ್ಮದರ್ಶಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಚನಾನಂದ ಶ್ರೀಗಳು ಹರಿಹರ ಪೀಠದ ಜವಾಬ್ದಾರಿಯ ಜೊತೆಗೆ ಬೆಂಗಳೂರಿನ ತಮ್ಮ ಹಳೆಯ ‘ಶ್ವಾಸ ಯೋಗ ಪೀಠ’ವನ್ನೂ ಮುಂದುವರಿಸುತ್ತಿರುವುದು ಟ್ರಸ್ಟ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಪೀಠಾರೋಹಣದ ಸಮಯದಲ್ಲಿ ನೀಡಿದ ಭರವಸೆಯಂತೆ ಶ್ವಾಸ ಪೀಠವನ್ನು ತ್ಯಜಿಸಿ, ಪೂರ್ಣ ಪ್ರಮಾಣದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಟ್ರಸ್ಟಿಗಳು ಒತ್ತಾಯಿಸಿದ್ದರು.
ಆರ್ಥಿ ಕ ಅವ್ಯವಹಾರದ ಆರೋಪ: ಮಠಕ್ಕೆ ಸರ್ಕಾರದಿಂದ ಬಂದಿರುವ ಸುಮಾರು 8 ಕೋಟಿ ರೂಪಾಯಿ ಅನುದಾನ ಮತ್ತು ಹಳೆಯ ಲೆಕ್ಕಪತ್ರಗಳ ವಿಚಾರದಲ್ಲಿ ಸ್ವಾಮೀಜಿ ಮತ್ತು ಟ್ರಸ್ಟಿಗಳ ನಡುವೆ ಸಂಘರ್ಷ ಉಂಟಾಗಿತ್ತು. ಮಾರ್ಚ್ 10, 2026 ರಂದು ನಡೆದ ಸಭೆಯಲ್ಲಿ ಲೆಕ್ಕಪತ್ರ ಕೇಳಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ನೂಕಾಟ-ತಳ್ಳಾಟ ನಡೆದು, ಗಲಾಟೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಶ್ವಾಸ ಯೋಗ ಪೀಠವನ್ನು ತ್ಯಜಿಸಲು ಟ್ರಸ್ಟ್ ಮುಖಂಡರು ಶ್ರೀಗಳಿಗೆ ಗಡುವು ನೀಡಿದ್ದರು. ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಮಾರ್ಚ್ 24ರಂದು ಟ್ರಸ್ಟ್ ಸಭೆ ಕರೆಯಲಾಗಿತ್ತು.ಮಠದ ಆಡಳಿತಾಧಿಕಾರಿ ಎಚ್.ಪಿ. ರಾಜಕುಮಾರ್ ಅವರು ತಮ್ಮ ಮೇಲೆ ಹಲ್ಲೆ ನಡೆದಿದೆ ಮತ್ತು ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ಡಿವಿಆರ್ ಕಳವು ಮಾಡಲಾಗಿದೆ ಎಂದು ಹರಿಹರ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಸ್ವಾಮೀಜಿಗಳ ಸ್ಪಷ್ಟನೆ: ಈ ಹಿಂದೆ ಸ್ವಾಮೀಜಿಯವರು ಇತರ ಪೀಠಗಳೊಂದಿಗೆ ತಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ತಾವು ಸಮಾಜದ ಸಂಘಟನೆಗಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.ಸಮುದಾಯದ ಮುಖಂಡರು ಮತ್ತು ಟ್ರಸ್ಟಿಗಳು ವಚನಾನಂದ ಶ್ರೀಗಳು ಎರಡೂ ಪೀಠಗಳನ್ನು ನಿಭಾಯಿಸುವ ಬದಲು ಯಾವುದಾದರೂ ಒಂದಕ್ಕೆ ಸೀಮಿತವಾಗಬೇಕು ಎಂದು ಪಟ್ಟು ಹಿಡಿದಿರುವುದು ಈ ವಿವಾದದ ಕೇಂದ್ರ ಬಿಂದುವಾಗಿದೆ.

