ಆನ್‌ಲೈನ್ ಆಹಾರ ವಿತರಣಾ ವೇದಿಕೆ ಜೊಮ್ಯಾಟೊ ತನ್ನ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ಡೆಲಿವರಿ ಬಾಯ್ಗಳ ಹಿತದೃಷ್ಟಿಯಿಂದ ಅವರ ವಿಶ್ರಾಂತಿಗಾಗಿ ‘ರೆಸ್ಟ್ ಪಾಯಿಂಟ್’ ಸ್ಥಾಪನೆ ಮಾಡಿದೆ. ಈ ಮೂಲಕ ಡೆಲಿವರಿ ಬಾಯ್ಗಳಿಗೆ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತಿದೆ ಎಂದು ಕಂಪೆನಿ ಹೇಳಿದೆ.
ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರುಗ್ರಾಮದಲ್ಲಿ ಈಗಾಗಲೇ ಎರಡು ‘ರೆಸ್ಟ್ ಪಾಯಿಂಟ್ʼಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಡೆಲವರಿ ಏಜೆಂಜ್ಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ಶುರು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ರೆಸ್ಟ್ ಪಾಯಿಂಟ್‌ಗಳಲ್ಲಿ ಶುದ್ಧ ಕುಡಿಯುವ ನೀರು, ಫೋನ್-ಚಾರ್ಜಿಂಗ್ ಸ್ಟೇಷನ್‌ಗಳು, ವಾಷ್ ರೂಮ್‌ಗಳು ಇರಲಿವೆ. ಅಷ್ಟೇ ಅಲ್ಲದೇ ಹೈ-ಸ್ಪೀಡ್ ಇಂಟರ್ನೆಟ್, 24/7 ಹೆಲ್ಪ್‌ಡೆಸ್ಕ್ ಮತ್ತು ಪ್ರಥಮ ಚಿಕಿತ್ಸಾ ಘಟಕಗಳೂ ಇರುತ್ತವೆ ಎಂದು ಅವರು ತಿಳಿಸಿದ್ದಾರೆ. ಆದರೆ ಇದನ್ನು ಎಷ್ಟು ನಗರಗಳಲ್ಲಿ, ಎಷ್ಟು ಸಂಖ್ಯೆಗಳಲ್ಲಿ ಇದನ್ನು ಆರಂಭಿಸಲಾಗುವುದು ಎಂಬ ಮಾಹಿತಿ ನೀಡಲಿಲ್ಲ.