ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಪರ್ಧಿಸಲಿರುವ ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಒಟ್ಟಾರೆ 12 ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಇವರ ಪೈಕಿ ಒಬ್ಬರು ಆರ್ಥಿಕ ಕನ್ಸಲ್ಟೆಂಟ್ ಆದರೆ, ಒಬ್ಬರು ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದರೆ, ಮತ್ತೊಬ್ಬರು ಅಂಗಡಿ ಮಾಲೀಕರಾಗಿದ್ದು, ಮಗದೊಬ್ಬರು ಉಪ್ಪಿನಕಾಯಿ ಮಾರುವವರಾಗಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿರುವ ಮಮತಾ ಬ್ಯಾನರ್ಜಿಗೆ ಈ ಉಪ ಚುನಾವಣೆ ಹುದ್ದೆ ಉಳಿಸಿಕೊಳ್ಳಲು ನಿರ್ಣಾಯಕವಾಗಿದೆ.
ಇದೇ ವೇಳೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕೆಲವರು ಸುಮ್ಮನೇ ಒಂದು ಅನುಭವ ಇರಲಿ ಎಂದು ಸ್ಫರ್ಧಿಸುತ್ತಿದ್ದರೆ ಮತ್ತೆ ಕೆಲವರು ವ್ಯವಸ್ಥೆಯಲ್ಲಿ ಬದಲಾವಣೆ ತರಲು ತಮ್ಮದೂ ಒಂದು ಯತ್ನವಿರಲಿ ಎಂದುಕೊಂಡಿದ್ದಾರೆ. ಮೂಲಗಳ ಪ್ರಕಾರ ಒಂದಿಬ್ಬರು ಡಮ್ಮಿ ಅಭ್ಯರ್ಥಿಗಳೂ ಸಹ ಸ್ಫರ್ಧೆಯಲ್ಲಿದ್ದಾರೆ.
ಅಕ್ಟೋಬರ್ 11ರ ನಂತ್ರ ಮಹತ್ವದ ಬದಲಾವಣೆ: ಈ ರಾಶಿಯವರಿಗಿದೆ ಅದೃಷ್ಟ
“ನನ್ನ ಸಾಮಾಜಿಕ ಕೆಲಸ ಮುಂದುವರೆಯಲು ಅನುವಾಗಲೆಂದು ಸ್ವಲ್ಪ ಪ್ರಚಾರ ಪಡೆಯೋಣ ಎಂದು ಚುನಾವಣೆಗೆ ನಿಂತಿದ್ದೇನೆ” ಎಂದು ಸ್ವಸಹಾಯ ಸಂಘ ನಡೆಸುತ್ತಿರುವ ಉಪ್ಪಿನಕಾಯಿ ವ್ಯಾಪಾರಿ ರುಮಾ ನಂದನ್ ತಿಳಿಸಿದ್ದಾರೆ.
ಇದೇ ವೇಳೆ, 60ರ ಹರೆಯದ ಸುಬ್ರತಾ ಬೋಸ್ ಹಾಗೂ 50ರ ಹರೆಯದ ಮಲಾಯ್ ಗುಹಾ ರಾಯ್ ಸುಮ್ಮನೇ ಇರಲಿ ಎಂದು ಕಣಕ್ಕಿಳಿದಿರುವುದಾಗಿ ಹೇಳಿಕೊಂಡಿದ್ದಾರೆ.
“ನಂದಿಗ್ರಾಮದಲ್ಲೂ ಸ್ಪರ್ಧಿಸಿದ್ದ ನನಗೆ 77 ಮತಗಳು ಬಿದ್ದಿದ್ದವು. ನಾನು ಯಾರೆಂದು ಗೊತ್ತೇ ಇರದ ಜಾಗಗಳಲ್ಲೂ ಸಹ ನನಗೆ ಸಿಕ್ಕ ಜನಪ್ರಿಯತೆಯನ್ನು ಎಂಜಾಯ್ ಮಾಡಿದೆ” ಎನ್ನುತ್ತಾರೆ ವಿತ್ತೀಯ ಸಲಹೆಗಾರರಾದ ಬೋಸ್.
“ಭ್ರಷ್ಟಾಚಾರ ಹಾಗೂ ಚುನಾವಣೋತ್ತರ ಹಿಂಸಾಚಾರದ ವಿರುದ್ಧದ ಹೋರಾಟ ಮಾಡಲು ನಾನು ಚುನಾವಣೆಯಲ್ಲಿ ಗಂಭೀರವಾಗಿ ಸ್ಫರ್ಧಿಸುತ್ತಿದ್ದೇನೆ” ಎನ್ನುತ್ತಾರೆ 32ರ ಹರೆಯದ ಚಂದ್ರಚುರ್ ಗೋಸ್ವಾಮಿ ತಿಳಿಸಿದ್ದಾರೆ. ಪರಿಸರ ಅಧ್ಯಯನದಲ್ಲಿ ಚಿನ್ನದ ಪದಕ ಗೆದ್ದಿರುವ ಗೋಸ್ವಾಮಿ ಶಾಸ್ತ್ರೀಯ ಸಂಗೀತಗಾರ್ತಿಯೂ ಹೌದು.
ಯೋಗ ತರಬೇತುದಾರಿಣಿಯಾದ ಸ್ವರ್ಣಲತಾ ಸರ್ಕಾರ್ ಮೂರು ವರ್ಷ ಹಳೆಯ ಭಾರತೀಯ ನ್ಯಾಯ್ ಅಧಿಕಾರ ರಕ್ಷಾ ಪಾರ್ಟಿಯಿಂದ ಸ್ಫರ್ಧಿಸುತ್ತಿದ್ದರೆ ಮತ್ತೊಬ್ಬರು ಬಹುಜನ ಮಹಾ ಪಾರ್ಟಿಯಿಂದ ’ಬದಲಾವಣೆ ತರುವ’ ಆಲೋಚನೆಯಿಂದ ಕಣದಲ್ಲಿದ್ದಾರೆ.
ಕೋಲ್ಕತ್ತಾದ ಖಾಸಗಿ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿರುವ ಸತದ್ರು ರಾಯ್ ಸಹ ಈ ಚುನಾವಣೆಯಲ್ಲಿ ಸ್ಫರ್ಧೆಗಿಳಿದಿದ್ದಾರೆ.