ಬಾಡಿ ಶೇಮಿಂಗ್ ಮಾಡೋದು ತಪ್ಪು ಎಂದು ತಿಳಿದಿದ್ದರೂ ಸಹ ಅನೇಕರು ಈ ದುರಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಯಾರೇ ದಪ್ಪಗಿರಲಿ, ತೆಳ್ಳಗಿರಲಿ, ಕಪ್ಪಿರಲಿ ಹೀಗೆ ದೇಹದ ಯಾವುದೋ ಒಂದು ನ್ಯೂನ್ಯತೆಯನ್ನ ಹಿಡಿದು ಅದನ್ನೇ ಆಡಿಕೊಳ್ತಾರೆ . ಬಾಡಿ ಶೇಮಿಂಗ್ಗೆ ಒಳಗಾದ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಆದರೆ ತನಗೆ ಬಾಡಿ ಶೇಮಿಂಗ್ ಮಾಡಿದ ವ್ಯಕ್ತಿಗೆ ಯುವತಿಯೊಬ್ಬರು ಕೌಂಟರ್ ನೀಡಿದ್ದು ಈ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ನೆಟ್ಟಿಗರು ಮಹಿಳೆಯ ಆತ್ಮಸ್ಥೈರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ .
ಜೆಮ್ನಿಕ್ವಾ ಎಂಬಾಕೆ ಟ್ವಿಟರ್ನಲ್ಲಿ ಈ ವಿಚಾರವನ್ನ ಜೂನ್ 13ರಂದು ಶೇರ್ ಮಾಡಿದ್ದಾರೆ. ನಾನು ಮನೆಯ ಒಳಕ್ಕೆ ನಡೆದುಕೊಂಡು ಹೋಗುತ್ತಿದ್ದೆ. ಆಗ ನನ್ನ ತಾಯಿಯ ಸ್ನೇಹಿತರೊಬ್ಬರು ನನ್ನ ತೂಕ ಹೆಚ್ಚಾಗಿದೆ ಎಂದು ಹೇಳಿದ್ರು. ನಾನು ಕೂಡಲೇ ಅರೆ..! ನಾನು ನಿಮ್ಮ ಬಗ್ಗೆ ಇದನ್ನೇ ಯೋಚಿಸುತ್ತಿದ್ದೆ ಎಂದು ಹೇಳಿದೆ. ನನ್ನ ಈ ಉತ್ತರ ಕೇಳಿದ ನನ್ನ ತಂದೆ ಬಿದ್ದು ಬಿದ್ದು ನಗ್ತಿದ್ರೆ ನನ್ನ ತಾಯಿ ಶಾಕ್ಗೊಳಗಾದ್ರು ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು 2 ಮಿಲಿಯನ್ಗೂ ಅಧಿಕ ಲೈಕ್ಸ್ ಹಾಗೂ 21 ಸಾವಿರಕ್ಕೂ ಅಧಿಕ ರಿಟ್ವೀಟ್ಗಳನ್ನ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅನೇಕರು ಮುಂದಿನ ದಿನಗಳಲ್ಲಿ ನಮಗೆ ಈ ರೀತಿ ಬಾಡಿಶೇಮಿಂಗ್ ಮಾಡಿದ್ರೆ ನಾವು ಕೂಡ ಇದೇ ಉತ್ತರವನ್ನ ನೀಡುತ್ತೇವೆ ಎಂದು ಹೇಳ್ತಿದ್ದಾರೆ.