alex Certify ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

ಕೋಲ್ಕತ್ತಾ: ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಶೂ ಎಸೆದಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಲ್ಲಿನ ಆಸ್ಪತ್ರೆಯಿಂದ ಹೊರಗೆ ಕರೆದೊಯ್ಯುತ್ತಿದ್ದಾಗ ಪಶ್ಚಿಮ ಬಂಗಾಳದ ಅಮ್ತಾಲಾ ಪ್ರದೇಶದ ಮಹಿಳೆಯೊಬ್ಬರು ಮಂಗಳವಾರ ಅವರ ಮೇಲೆ ಶೂ ಎಸೆದಿದ್ದಾರೆ. ಆದರೆ, ಮಹಿಳೆ ಎಸೆದ ಪಾದರಕ್ಷೆ ಚಟರ್ಜಿಯವರ ಮೇಲೆ ಬಿದ್ದಿಲ್ಲ.

ಅಮಾನತುಗೊಂಡಿರುವ ಟಿಎಂಸಿಯ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಎರಡು ಅಪಾರ್ಟ್‌ಮೆಂಟ್‌ಗಳಿಂದ ಜಾರಿ ನಿರ್ದೇಶನಾಲಯವು ಸುಮಾರು 50 ಕೋಟಿ ರೂಪಾಯಿ ನಗದು, ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಮಧ್ಯವಯಸ್ಕ ಮಹಿಳೆ ಶುಭ್ರ ಘೋರುಯಿ, ಚಟರ್ಜಿ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಹೇಳಲಾಗಿದೆ.

ಪಾರ್ಥ ಚಟರ್ಜಿಯನ್ನು ನನ್ನ ಚಪ್ಪಲಿಯಿಂದ ಹೊಡೆಯಲು ಇಲ್ಲಿಗೆ ಬಂದಿದ್ದೇನೆ. ಜನರು ಕೆಲಸವಿಲ್ಲದೆ ರಸ್ತೆಗಳಲ್ಲಿ ಅಲೆದಾಡುತ್ತಿರುವಾಗ ಅಪಾರ್ಟ್‌ಮೆಂಟ್‌ನ ನಂತರ ಅಪಾರ್ಟ್‌ಮೆಂಟ್‌ ನಿರ್ಮಿಸಿ ಇಷ್ಟೊಂದು ಹಣ ಕೂಡಿಟ್ಟಿದ್ದಾರೆ. ಜನರನ್ನು ವಂಚಿಸಿ ಎಸಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂಥವರನ್ನು ಹಗ್ಗದಿಂದ ಎಳೆಯಬೇಕು. ನಾನು ಬರಿಗಾಲಿನಲ್ಲಿ ಮನೆಗೆ ಹಿಂತಿರುಗುತ್ತೇನೆ. ಇದು ನನ್ನ ಕೋಪ ಮಾತ್ರವಲ್ಲ, ಪಶ್ಚಿಮ ಬಂಗಾಳದ ಲಕ್ಷ ಲಕ್ಷ ಜನರ ಆಕ್ರೋಶದ ಕಿಚ್ಚಾಗಿದೆ ಎಂದು ಘೋರುಯಿ ತಿಳಿಸಿದ್ದಾರೆ.

ಹಿರಿಯ ನಾಯಕ ಪಾರ್ಥ ಚಟರ್ಜಿಯನ್ನು ಇಡಿ ಆಸ್ಪತ್ರೆಯ ಆವರಣದಿಂದ ವಾಹನದಲ್ಲಿ ಭದ್ರತಾ ಸಿಬ್ಬಂದಿ ಕರೆದೊಯ್ದಿದ್ದಾರೆ. ಮಹಿಳೆ ಎಸೆದ ಚಪ್ಪಲಿ ಚಟರ್ಜಿ ಮೇಲೆ ಬಿದ್ದಿಲ್ಲ. ಒಂದು ವೇಳೆ ಅವರ ಮೇಲೆ ಬಿದ್ದಿದ್ದರೆ ತನಗೆ ತುಂಬಾ ಸಂತೋಷವಾಗುತ್ತಿತ್ತು. ತನ್ನ ಚಪ್ಪಲಿಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜುಲೈ 23 ರಂದು ಇಡಿ ಚಟರ್ಜಿ ಮತ್ತು ಮುಖರ್ಜಿ ಇಬ್ಬರನ್ನೂ ಬಂಧಿಸಿತ್ತು. ಬಂಧಿತ ಚಟರ್ಜಿಯನ್ನು ಇಡಿ ಅಧಿಕಾರಿಗಳು ಮಂಗಳವಾರ ವೈದ್ಯಕೀಯ ತಪಾಸಣೆಗಾಗಿ ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಪೊಲೀಸರು ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...