ಬೆಂಗಳೂರಲ್ಲಿ ಮನೆ ಮಾಲೀಕರ ಕಿರಿಕ್ ಬಗ್ಗೆ ಕೇಳಿದ್ದವರಿಗೆ ಈ ಸುದ್ದಿ ತುಂಬಾ ವಿಶೇಷವೆನಿಸುತ್ತದೆ. ಯಾಕಂದ್ರೆ ಮನೆ ಮಾಲೀಕರೆಂದರೆ ಬಾಡಿಗೆ ಹೆಚ್ಚಿಗೆ ಕೇಳುವವರು, ಕಷ್ಟ ಕೇಳಿಸಿಕೊಳ್ಳದವರು ಎಂಬೆಲ್ಲಾ ಆರೋಪಗಳ ನಡುವೆ ಮಾಲೀಕರ ನಡೆ ಮೆಚ್ಚುಗೆ ಗಳಿಸಿದೆ.
ಸೃಷ್ಟಿ ಮಿತ್ತಲ್ ಎಂಬುವವರು ತಮ್ಮ ಮನೆ ಮಾಲೀಕರ ಬಗ್ಗೆ ಹಾಕಿರುವ ಪೋಸ್ಟ್ ಸಾಕಷ್ಟು ಗಮನ ಸೆಳೆದಿದ್ದು ವೈರಲ್ ಆಗಿದೆ.
“ನನ್ನ ಮನೆ ಮಾಲೀಕರು ಅತ್ಯಂತ ಸಿಹಿಯಾದ ವ್ಯಕ್ತಿ. ಅವರು ನಮ್ಮನ್ನು ಭೇಟಿಯಾದಾಗಲೆಲ್ಲಾ (ನಾನು ಮತ್ತು ನನ್ನ ರೂಮ್‌ಮೇಟ್), ನಮಗಾಗಿ ಏನನ್ನಾದರೂ ತರುವುದನ್ನ ಅವರು ಎಂದಿಗೂ ಮರೆಯುವುದಿಲ್ಲ. ಜ್ಯೂಸ್, ಶೇಕ್ಸ್, ತಂಪು ಪಾನೀಯಗಳನ್ನು ತರುತ್ತಾರೆ. ಈ ಬಾರಿ ಅವರು ನಮಗೆ ಕೋಲ್ಡ್ ಕಾಫಿ ತಂದರು,”ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಭಾರೀ ಪ್ರತಿಕ್ರಿಯೆಗಳನ್ನು ಗಳಿಸಿದೆ. ಮನೆಮಾಲೀಕರನ್ನ ಶ್ಲಾಘಿಸಿ, ಹೆಣ್ಣುಮಕ್ಕಳು ಅವರ ಕುಟುಂಬದಲ್ಲಿರುವಂತಹ ಅನುಭವ ಸಿಗುವಂತೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮತ್ತೊಂದೆಡೆ ಮನೆ ಮಾಲೀಕರ ಈ ವರ್ತನೆ ಬಗ್ಗೆ ಕೆಲವರು ಇಂತಹ ಅದೃಷ್ಟ ನಮಗಿಲ್ವೇ ಎಂದು ಹೊಟ್ಟೆಕಿಚ್ಚು ಪಟ್ರೆ, ಕೆಲವರು ನಾವು ನಿಜಕ್ಕೂ ಇದೇ ಭೂಮಿ ಮೇಲಿದ್ದೇವಾ ಎಂದು ಆಶ್ಚರ್ಯಪಟ್ಟಿದ್ದಾರೆ.