ಬೆಂಗಳೂರು ಮಹಾನಗರ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಜನ ಕಷ್ಟಪಟ್ಟು ಹಲವು ಕೆಲಸಗಳನ್ನ ಮಾಡುತ್ತಿರುತ್ತಾರೆ. 2 ಪಾಳಿಗಳಲ್ಲಿ ಎರಡೆರಡು ಕೆಲಸ ಮಾಡುವವರೂ ಇದ್ದಾರೆ.
ಇಲ್ಲಿ ದುಡಿಯಲು ಹಲವು ಅವಕಾಶಗಳಿವೆ. ಅಂತಹ ಅವಕಾಶಗಳನ್ನು ಬಳಸಿಕೊಳ್ಳುವವರ ನಡುವೆ ಬೆಂಗಳೂರಿನ ದುಬಾರಿ ಜೀವನ, ಟ್ರಾಫಿಕ್ ಸಮಸ್ಯೆಯೂ ನಗರದ ಜನರನ್ನು ಕಾಡುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಇಲ್ಲಿ ಹೆಚ್ಚಿನ ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯಬೇಕಾಗುತ್ತದೆ.
ಜೊತೆಗೆ ಆಟೋ, ಕ್ಯಾಬ್ ಗೆ ಹೆಚ್ಚಿನ ಹಣವನ್ನೂ ವ್ಯಯಿಸಬೇಕಾಗುತ್ತದೆ. ಇಂತಹ ಪೀಕ್ ಬೆಂಗಳೂರಲ್ಲಿ ರ್ಯಾಪಿಡೋ ಪ್ರಯಾಣದ ಬಗ್ಗೆ ಯುವತಿಯೊಬ್ಬರು ಅನುಭವ ಹಂಚಿಕೊಂಡಿದ್ದು ಗಮನ ಸೆಳೆದಿದೆ.
ಶೃತಿ ಎಂಬ ಯುವತಿ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ “ಬೆಂಗಳೂರಿನ ಪೀಕ್ ಮೂಮೆಂಟ್ ನಲ್ಲಿ ಒಂದು ಪ್ರತಿಷ್ಠಿತ ಕಂಪನಿಯ ಮ್ಯಾನೇಜರ್ ಕೂಡ ಆಗಿರುವ ರ್ಯಾಪಿಡೋ ಚಾಲಕ ಸಮಂಜಸವಾದ ಹಣದಲ್ಲಿ ಗ್ರಾಹಕರನ್ನು ಅವರು ಹೋಗಬೇಕಾದ ಸ್ಥಳಕ್ಕೆ ತಲುಪಿಸುತ್ತಾರೆ. ಬೆಂಗಳೂರಲ್ಲಿ ಏನೂ ಬೇಕಾದರೂ ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.
ಈ ಪೋಸ್ಟ್ ಗಮನಿಸಿದ ರ್ಯಾಪಿಡೋ ಕಂಪನಿ ಮೆಚ್ಚುಗೆಯಿಂದ ಪ್ರತಿಕ್ರಿಯಿಸಿದೆ. “ಹಾಯ್ ಶ್ರುತಿ ನಮ್ಮ ಚಾಲಕನ ಬಗ್ಗೆ ನಿಮ್ಮ ಮಾತುಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನಿಮ್ಮ ಪೋಸ್ಟ್ ಅನ್ನು ಓದಿದ ನಂತರ ನಾವು ನಿಜವಾಗಿಯೂ ಸಂತಸಗೊಂಡಿದ್ದೇವೆ ಮತ್ತು ನಮ್ಮೊಂದಿಗೆ ನಿಮ್ಮ ಮುಂಬರುವ ಸವಾರಿಗಳು ಸಂತೋಷಕರವಾಗಿರುತ್ತವೆ ಎಂದು ನಾವು ಭಾವಿಸುತ್ತೇವೆ. ರ್ಯಾಪಿಡೋ ಜೊತೆಗೆ ಸವಾರಿ ಮಾಡುತ್ತಿರಿ” ಎಂದು ಹೇಳಿದೆ.