1947ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಲಿವುಡ್ ನಟಿ ಕಂಗನಾ ರಣಾವತ್ರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.
ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್, ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ನರೇಂದ್ರ ಮೋದಿ ದೇಶದ ಅಧಿಕಾರವನ್ನು ವಹಿಸಿಕೊಂಡ ಬಳಿಕ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ರು.
ಕಂಗನಾರ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ, ಈ ರೀತಿಯ ಹೇಳಿಕೆ ನೀಡಿರೋದು ನಿಜಕ್ಕೂ ಆಘಾತಕಾರಿಯಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಲೇ ಕಂಗನಾ ರಣಾವತ್ಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.
ಕಂಗನಾ ರಣಾವತ್ ನೀಡಿರುವ ಈ ಹೇಳಿಕೆಯು ಮಹಾತ್ಮ ಗಾಂಧಿ, ನೆಹರೂ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ನೇತೃತ್ವದಲ್ಲಿ ಸಿಕ್ಕಿದ ದೇಶದ ಸ್ವಾತಂತ್ರ್ಯವನ್ನು ಅವಮಾನಿಸಿದೆ. ಜೊತೆಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ತ್ಯಾಗಕ್ಕೂ ಅಪಮಾನ ಬಗೆದಿದೆ ಎಂದು ಸರಣಿ ಟ್ವೀಟ್ಗಳ ಮೂಲಕ ಆನಂದ್ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಪ್ರಶಸ್ತಿಗಳನ್ನು ನೀಡುವ ಮುನ್ನ ಆ ವ್ಯಕ್ತಿಯು ರಾಷ್ಟ್ರ ಹಾಗೂ ದೇಶದ ವೀರರಿಗೆ ಅವಮಾನ ಮಾಡದಂತಹ ವ್ಯಕ್ತಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ರು.
ಬಿಹಾರದಲ್ಲಿ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ಹಿಂದೂಸ್ತಾನಿ ಅವಾಮ್ ಮೋರ್ಚಾ ಅಧ್ಯಕ್ಷ ಜಿತನ್ ರಾಮ್ ಮಾಂಝಿ, ಈ ನಟಿಯನ್ನು ಎಲ್ಲಾ ಸುದ್ದಿ ವಾಹಿನಿಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಪದ್ಮಶ್ರೀಯನ್ನು ಕಂಗನಾರಿಂದ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಗಾಂಧಿ, ನೆಹರೂ, ಪಟೇಲ್, ಭಗತ್ ಸಿಂಗ್, ಕಲಾಂ, ಸಾರ್ವಕರ್ ಅವರು ಸ್ವಾತಂತ್ರ್ಯಕ್ಕಾಗಿ ಭಿಕ್ಷೆ ಬೇಡಿದ್ದರು ಎಂದು ಜಗತ್ತು ಭಾವಿಸುತ್ತೆ ಅಂತಾ ಪ್ರತಿಕ್ರಿಯಿಸಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ನೀಲಂ ಗೋರ್ಹೆ, ಕಂಗನಾ ನೀಡಿರುವ ಹೇಳಿಕೆಗೆ ಆಕೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಬೇಕು. ಅಲ್ಲದೇ ಆಕೆಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನೂ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿರುವ ಎನ್ಸಿಪಿ ಪಕ್ಷದ ನಾಯಕ ಹಾಗೂ ಸಚಿವ ನವಾಬ್ ಮಲ್ಲಿಕ್ ಕೂಡ ಈ ವಿಚಾರವಾಗಿ ಮಾತನಾಡಿದ್ದರು, ಆಕೆ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸಿದ್ದಾರೆ. ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು. ಕಂಗನಾ ರಣಾವತ್ ಈ ರೀತಿಯ ಹೇಳಿಕೆ ನೀಡೋಕೂ ಮುನ್ನ ಮಲಾನಾ ಕ್ರೀಮ್ ಸೇವಿಸಿರಬೇಕು ಎಂದು ವಂಗ್ಯವಾಡಿದ್ದಾರೆ.