ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು ಪರಿಸರ ಸ್ನೇಹಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿದ್ದು, 2023ರ ಅಂತ್ಯಕ್ಕೆ ಸಾಮಾನ್ಯ ಭಕ್ತರಿಗೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ.
ಸದ್ಯ ದೇವಸ್ಥಾನದ ಪಾಯ ತೋಡುವ ಕೆಲಸದಲ್ಲಿ ಇಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದು, ಈ ಕೆಲಸ ಸೆಪ್ಟೆಂಬರ್ 15ಕ್ಕೆ ಮುಕ್ತಾಯವಾಗುವ ನಿರೀಕ್ಷೆ ಇದೆ. ಎರಡನೇ ಹಂತದ ನಿರ್ಮಾಣ ಕಾರ್ಯ ನವೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. 70 ಎಕರೆಯಲ್ಲಿ ಇರಲಿರುವ ಈ ದೇವಸ್ಥಾನದ ಆವರಣದ ಅಷ್ಟೂ ನಿರ್ಮಾಣ ಕೆಲಸ 2025ಕ್ಕೆ ಅಂತ್ಯವಾಗುವ ನಿರೀಕ್ಷೆ ಇದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 15 ಮಂದಿ ಸದಸ್ಯರ ಮಹತ್ವದ ಭೇಟಿಯ ಬಳಿಕ ಈ ಸಂಬಂಧ ಘೋಷಣೆ ಹೊರಬಿದ್ದಿದೆ.
ದೇವಸ್ಥಾನದ ಪಾಯ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಿದ್ದರು. ದೇಗುಲ ನಿರ್ಮಾಣದ ಜಾಗದಲ್ಲಿ ನೀರು ಕಂಡುಬಂದ ಬಳಿಕ ಈ ವರ್ಷದ ಜನವರಿಯಲ್ಲಿ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.