alex Certify ಸಿದ್ದಗಂಗಾ ಶ್ರೀಗಳಿಗೆ ʻಭಾರತ ರತ್ನʼ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದಗಂಗಾ ಶ್ರೀಗಳಿಗೆ ʻಭಾರತ ರತ್ನʼ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ : ಸಿಎಂ ಸಿದ್ದರಾಮಯ್ಯ

ತುಮಕೂರು :  ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳಿಗೆ ಭಾರತ ರತ್ನ ನೀಡಬೇಕು. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಕರ್ನಾಟಕ ರತ್ನ ಶತಾಯುಷಿ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ “ಸ್ಮೃತಿ ವನ”ವನ್ನು ಉದ್ಘಾಟಿಸಿ, ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ,ಶಿವಕುಮಾರ ಮಹಾಶಿವಯೋಗಿ ಶ್ರೀಗಳು ಬಸವಾದಿ ಶರಣರ ಆಶಯಗಳನ್ನು ಆಚರಿಸಲು ಬದುಕನ್ನು ಮುಡಿಪಾಗಿಟ್ಟು ನುಡಿದಂತೆ ನಡೆದ ಮಹಾಯೋಗಿಗಳು.12ನೇ ಶತಮಾನದಲ್ಲೇ ಬಸವಾದಿ ಶರಣರು ಜಾತಿ ರಹಿತ, ವರ್ಗ ರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೇ ಮಾಡಿದ್ದರು. ಮನುಷ್ಯ ಕುಲ ಇರುವವರೆಗೂ ಶಾಶ್ವತ ಆಗಿ ಉಳಿಯುವ ಸಂದೇಶ ಮತ್ತು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಈ ಮೌಲ್ಯಗಳನ್ನು ಪಾಲಿಸುವುದೇ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ ಎಂದರು. ‌

ಭಾರತ ಸಂವಿಧಾನದ ಆಶಯ ಮತ್ತು ಬಸವಾದಿ ಶರಣರ ಹೋರಾಟದ ಆಶಯ ಒಂದೇ ಆಗಿದೆ. ನಮಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ. ಜನರ ಬದುಕನ್ನು ಎತ್ತಿರುವುದೇ ಈ ಸಂವಿಧಾನ ಎಂಬ ಧರ್ಮಗ್ರಂಥದ ಆಶಯ ಎಂದು ಹೇಳಿದ್ದಾರೆ.

ಕಾಯಕ ಮತ್ತು ದಾಸೋಹ ಎರಡೂ ಜೀವನ ಮೌಲ್ಯಗಳು. ಈ ಮೌಲ್ಯಗಳನ್ನು ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಆಚರಿಸಿದ್ದರು‌. ಇಂದು 10 ಸಾವಿರ ಮಕ್ಕಳು ಮಠದಲ್ಲಿ ವಿದ್ಯೆ, ವಸತಿ, ಅನ್ನ ಪಡೆಯುತ್ತಿದ್ದಾರೆ ಎಂದರೆ ಶಿವಕುಮಾರ ಮಹಾಯೋಗಿಗಳ ಬದುಕಿನ ಆಚರಣೆಯೇ ಕಾರಣ ಎಂದರು.

ನಂಜುಂಡಪ್ಪ ಅವರ ವರದಿಯಂತೆ ಸರ್ಕಾರ ಕೆಲಸ ಮಾಡುತ್ತಿದೆ. ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಕ್ಷಿಣ ಮತ್ತು ಉತ್ತರ ಕರ್ನಾಟಕ ನಡುವಿನ ಅಭಿವೃದ್ಧಿಯ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಶ್ರಮಿಸುತ್ತಿದೆ. ಶಿಕ್ಷಣದ ಮೂಲಕ ತಾರತಮ್ಯ ಮತ್ತು ಅಸಮಾನ ಪ್ರಜ್ಞೆಯನ್ನು ಅಳಿಸಲು ಸಾಧ್ಯವಿದೆ. ಬಸವಾದಿ ಶರಣರ ತತ್ವಾದರ್ಶಗಳು ಸಮಾಜದಲ್ಲಿ ಜಾರಿ ಆದಾಗ ಮಾತ್ರ ಸಮಾನ ಅವಕಾಶಗಳು ಸೃಷ್ಟಿಯಾಗಲು ಸಾಧ್ಯ ಎಂದು ತಿಳಿಸಿದ್ದಾರೆ.

ಶಿವಕುಮಾರ ಸ್ವಾಮಿಗಳು ಬದುಕಿನುದ್ದಕ್ಕೂ ಅಕ್ಷರ ಸಂಸ್ಕೃತಿ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ‌ ಬದಲಾವಣೆ ತರಲು ಶ್ರಮಿಸಿದರು‌. ಹೀಗಾಗಿ ಶ್ರೀಗಳ ಕಾರ್ಯ, ಕಾಳಜಿ ಮತ್ತು ಅವರ ನಡೆ-ನುಡಿ ಈ ಮಣ್ಣಿನಲ್ಲಿ ಅಜರಾಮರ ಆಗಿ ಉಳಿಯಲಿದೆ ಎಂದು ಹೇಳಿದ್ದಾರೆ.

ಬಸವಾದಿ ಶರಣರ ಆಶಯದಂತೆ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಇದಕ್ಕಾಗಿ ವಾರ್ಷಿಕ 58 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಇವೆಲ್ಲವೂ ಸಮಸಮಾಜದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ನಮ್ಮ ಸರ್ಕಾರ ಇಟ್ಟ ದಿಟ್ಟ ಹೆಜ್ಜೆಗಳಾಗಿವೆ ಎಂದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...