ಒಡಿಶಾದ ಸಿಮಿಲಿಪಾಲ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ವಾರದ ಬಳಿಕ ಸೂಕ್ತ ಕ್ರಮಕ್ಕೆ ಒಡಿಶಾ ರಾಜ್ಯ ಸರ್ಕಾರ ಆದೇಶ ನೀಡಿದೆ.
ಒಡಿಶಾ ಸಿಎಂ ನವೀನ್ ಪಟ್ನಾಯಕ್ ಈ ಸಂಬಂಧ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಸಿಮಿಲಿಪಾಲ್ ವಿಶ್ವದ ಅಮೂಲ್ಯ ಅರಣ್ಯ ಆಸ್ತಿಗಳಲ್ಲಿ ಒಂದಾಗಿದ್ದು, ಕಾಡಿನಲ್ಲಿ ಅಗ್ನಿ ಅವಘಡಗಳು ಮರುಕಳಿಸದಂತೆ ಮುನ್ನಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಬುಧವಾರ ನಿರ್ದೇಶನ ನೀಡಿದ್ದಾರೆ.
ಸಿಮಿಲಿಪಾಲ್ ಸಂರಕ್ಷಿತ ಅಭಯಾರಣ್ಯ 2750 ಚದರ ಕಿಲೋಮೀಟರ್ವರೆಗೆ ವ್ಯಾಪಿಸಿದೆ. ಇಲ್ಲಿ ಬೆಂಕಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯಾಪಿಸುತ್ತಲೇ ಹೋಗಿದೆ. ಸಿಮಿಲಿಪಾಲ್ ಅರಣ್ಯ ವಿಭಾಗದ ಒಟ್ಟು 21 ಶ್ರೇಣಿಗಳಲ್ಲಿ ಎಂಟು ಕಡೆ ಬೆಂಕಿ ಆವರಿಸಿದೆ. ಇದರಿಂದ ಅಳಿವನಂಚಿನಲ್ಲಿರುವ ಪ್ರಾಣಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಒಡಿಶಾದ ರಾಜಮನೆತನದ ಟ್ವೀಟ್ ಬಳಿಕ ಕ್ರಮಕ್ಕೆ ಮುಂದಾಗಿದೆ ಸರ್ಕಾರ.
ಮಯೂರ್ಭಂಜ್ನ ಹಿಂದಿನ ರಾಜಮನೆತನದ ರಾಜಕುಮಾರಿ ಅಕ್ಷಿತಾ ಎಂ. ಭಂಜದೇವ್ ಸಿಮಿಲಿಪಾಲ್ ದುರಂತದ ಬಗ್ಗೆ ಟ್ವೀಟ್ ಮಾಡಿದ ಬಳಿಕ ಓಡಿಶಾ ಸರ್ಕಾರ ಅಲರ್ಟ್ ಆಗಿದೆ.
ಮಾರ್ಚ್ 1ರಂದು ಟ್ವೀಟ್ ಮಾಡಿದ್ದ ಭಂಜದೇವ್, ಕಳೆದ ವಾರ ಮಯೂರ್ಭಂಜ್ ವಿನಾಶಕಾರಿ ಕಾಡ್ಗಿಚ್ಚಿಗೆ ಸಾಕ್ಷಿಯಾಗಿದೆ. ವಾರದ ಹಿಂದೆ ದಂತಗಳು ಕಂಡು ಬಂದಿದೆ. ಕೆಲ ತಿಂಗಳ ಹಿಂದಷ್ಟೇ ಸ್ಥಳೀಯ ಯುವಕರು ಸಿಮಿಲಿಪಾಲ್ನಲ್ಲಿ ಮರಳು ಮಾಫಿಯಾ ಬಗ್ಗೆ ವರದಿ ಮಾಡಿದ್ರು. ಕೆಲ ರಾಜ್ಯ ಮಾಧ್ಯಮಗಳನ್ನ ಹೊರತು ಪಡಿಸಿದ್ರೆ ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಏಷ್ಯಾದ 2ನೇ ಅತಿದೊಡ್ಡ ಅಭಯಾರಣ್ಯ ಕಾಡ್ಗಿಚ್ಚಿಗೆ ಒಳಗಾಗಿರೋದನ್ನ ವರದಿ ಮಾಡ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.
ಭಂಜದೇವ್ರ ಈ ಟ್ವೀಟ್ ಬಳಿಕ ಓಡಿಶಾ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ಕೂಡ ಈ ವಿಚಾರದ ಬಗ್ಗೆ ಕ್ರಮಕ್ಕೆ ಆದೇಶ ನೀಡಿದ್ದಾರೆ.