ಕೊರೊನಾ ದಾಳಿ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಪ್ರಸರಣ ತಡೆಯಲು ಸಾಫ್ಟ್‌ವೇರ್ ಕಂಪನಿಗಳಂತೂ ತಮ್ಮ ಎಲ್ಲ ಸಿಬ್ಬಂದಿಗೆ ಕಳೆದ ಎರಡು ವರ್ಷಗಳಿಂದ ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸಿಬಿಟ್ಟಿವೆ. ಬೆಳಗಾದರೆ ಸಾಕು, ಲ್ಯಾಪ್‌ಟಾಪ್ ಹಿಡಿದುಕೊಂಡು ಕಾಲ್ ಬಂದಿದೆ ಎಂದು ಕುಳಿತುಕೊಂಡರೆ ಮುಗಿದೇ ಹೋಯ್ತು.
ಮನೆಯಲ್ಲಿ ಯಾರಿದ್ದಾರೆ, ಎಲ್ಲಿ ಹೋದರು, ಏನಾಗುತ್ತಿದೆ, ಸ್ನಾನ, ತಿಂಡಿಗಳ ಅರಿವೇ ಇಲ್ಲದ ಸಾಫ್ಟ್‌ವೇರ್ ಸಿಬ್ಬಂದಿ ’ಕಾಲ್’ ಹೆಸರಿನಲ್ಲಿ ಮಗ್ನರಾಗಿರುತ್ತಾರೆ. ಇನ್ನು ಶನಿವಾರ -ಭಾನುವಾರ ಎರಡು ದಿನಗಳ ರಜೆಯು ಒತ್ತಡದಿಂದ ಸುಧಾರಿಸಿಕೊಳ್ಳುವುದರಲ್ಲೇ ಮುಗಿದುಹೋಗಿರುತ್ತದೆ. ಫ್ಯಾಮಿಲಿ ಟೈಮ್ ಎನ್ನುವುದು ಗಗನ ಕುಸುಮ ಆಗಿಹೋಗಿದೆ. ಇದು ನಮ್ಮ ವ್ಯಾಖ್ಯಾನ ಅಲ್ಲ, ಎಲ್ಲ ಮನೆಗಳಲ್ಲಿನ ಹೆಂಗಸರ ಎರಡು ವರ್ಷಗಳ ಅನುಭವದ ಸಾರ.
ಅರಬ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್ ನ್ಯೂಸ್..!
ಇಂಥದ್ದೇ ಒಬ್ಬ ಸಾಫ್ಟ್‌ವೇರ್ ಅಥವಾ ಪೂರಕ ಕ್ಷೇತ್ರದ ಉದ್ಯೋಗಿ ಪತಿರಾಯ ಎರಡು ವರ್ಷಗಳಿಂದ ಮನೆಯಲ್ಲೇ ಇದ್ದುಕೊಂಡು ಲ್ಯಾಪ್‌ಟಾಪ್-ಮೊಬೈಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾನೆ. ಇದರಿಂದ ತಲೆಕೆಟ್ಟು ಹೋಗಿದೆ, ಆಫೀಸ್‌ಗೆ ವಾಪಸ್ ಕರೆಸಿಕೊಳ್ಳಿ ಎಂದು ನೇರವಾಗಿ ಗಂಡನ ಆಫೀಸ್‌ನ ಬಾಸ್‌ಗೆ ಪತ್ನಿಯು ಪತ್ರ ಬರೆದು ಮನವಿ ಮಾಡಿದ್ದಾಳೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೊಡ್ಡ ಕಂಪನಿಗಳ ಬಾಸ್‌ಗಳು ಇದನ್ನು ಷೇರ್ ಮಾಡಿಕೊಂಡು, ನಮ್ಮ ಬಳಿ ಉತ್ತರವಿಲ್ಲ ಎಂದು ಹುಸಿ ನಗೆಬೀರುತ್ತಿದ್ದಾರೆ.
’’ಆತ್ಮೀಯ ಸಾರ್, ನಿಮ್ಮ ಸಿಬ್ಬಂದಿ ಮನೋಜ್ ಅವರ ಪತ್ನಿ ನಾನು. ಕೊರೊನಾದ ಎರಡೂ ಡೋಸ್‌ಗಳನ್ನು ಪತಿ ಪಡೆದಿದ್ದಾರೆ. ಅವರಿಗೆ ದಯಮಾಡಿ ಕಚೇರಿಯಿಂದಲೇ ಕೆಲಸ ಮಾಡುವಂತೆ ಆದೇಶಿಸಿ, ಕರೆಸಿಕೊಳ್ಳಿರಿ. ದಿನಕ್ಕೆ 10 ಬಾರಿ ಕಾಫಿ ಕುಡಿಯುತ್ತಾರೆ. ಹತ್ತಾರು ಕಡೆಗಳಲ್ಲಿ ಲ್ಯಾಪ್‌ಟಾಪ್ ಹಿಡಿದುಕೊಂಡು ಕೂತು, ರಂಪಾಟ ಮಾಡಿರುತ್ತಾರೆ. ಎರಡು ಮಕ್ಕಳನ್ನು ನೋಡಿಕೊಳ್ಳುವ ಜತೆಗೆ ಇದನ್ನೆಲ್ಲ ತಡೆದುಕೊಳ್ಳಲು ಆಗುತ್ತಿಲ್ಲ. ನಮ್ಮ ವೈವಾಹಿಕ ಜೀವನಕ್ಕೆ ತೊಡಕು ಎದುರಾಗುವಂತೆ ಕಾಣುತ್ತಿದೆ. ನನ್ನ ಸಾಧಾರಣ ಮನಸ್ಥಿತಿ ವಾಪಸ್ ಪಡೆಯಬೇಕೆಂಬ ಹಂಬಲ ದಿನೇ ದಿನೇ ಹೆಚ್ಚುತ್ತಿದೆ, ನೆರವು ನೀಡಿ’’ ಎಂದು ಪತ್ನಿಯು ಪತ್ರ ಬರೆದಿದ್ದಾರೆ.