ಮುಂಬೈ: “ನೀವು ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರನ್ನು ಏಕೆ ದ್ವೇಷಿಸುತ್ತೀರಿ..? ಇದು ನಿಮ್ಮ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ” ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತಕ್ಕೆ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಅಂಗಸಂಸ್ಥೆ ಬಿಡುಗಡೆ ಮಾಡಿದ ಪೋಸ್ಟರ್ ನಿಂದ, ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರ ಚಿತ್ರವನ್ನು ತೆಗೆದಿರುವುದಕ್ಕೆ ಶಿವಸೇನಾ ಸಂಸದ ಸಂಜಯ್ ರಾವುತ್ ಕೇಂದ್ರದ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ. ಇದು ಕೇಂದ್ರದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಅಲ್ಲದೆ, ನೀವು ನೆಹರೂ ಅವರನ್ನು ಯಾಕೆ ದ್ವೇಷಿಸುತ್ತೀರಿ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ವಾರದ ಅಂಕಣವಾದ ರೌತ್ ಥೋಕ್ ನಲ್ಲಿ ಕೇಂದ್ರದ ನಡೆಯನ್ನು ಟೀಕಿಸಿದರು. ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಪೋಸ್ಟರ್ ನಿಂದ ಜವಹರ್ ಲಾಲ್ ನೆಹರೂ ಹಾಗೂ ಮೌಲಾನಾ ಅಬ್ದುಲ್ ಕಲಾಂ ಅವರ ಚಿತ್ರಗಳನ್ನು ಹೊರತುಪಡಿಸಲಾಗಿದೆ. ಇದು ರಾಜಕೀಯ ಸೇಡು ತೀರಿಸಿಕೊಳ್ಳುವಿಕೆಯಾಗಿದೆ ಎಂದು ಅವರು ಆರೋಪಿಸಿದರು.
ಈಜುಕೊಳಕ್ಕೆ ಬಿದ್ದರೂ ಕಾನ್ಫರೆನ್ಸ್ ಕಾಲ್ ಮುಂದುವರೆಸಿದ ಭೂಪ
“ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ಇತಿಹಾಸ ಸೃಷ್ಟಿಸದವರು ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರನ್ನು ಹೊರಗಿಡುತ್ತಿದ್ದಾರೆ. ರಾಜಕೀಯ ಪ್ರತೀಕಾರದಿಂದ ಮಾಡಿದ ಈ ಕೃತ್ಯವು ಒಳ್ಳೆಯದಲ್ಲ. ಇದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಇದು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನವಾಗಿದೆ” ಎಂದು ಸಂಜಯ್ ರಾವುತ್ ಕಿಡಿಕಾರಿದ್ದಾರೆ.
“ಸ್ವಾತಂತ್ರ್ಯಾ ನಂತರ ನೆಹರೂ ಅವರ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
“ನೆಹರೂ ಅವರನ್ನು ದ್ವೇಷಿಸಲು ಅವರೇನು ಮಾಡಿದ್ದಾರೆ..? ವಾಸ್ತವವಾಗಿ ಅವರು ನಿರ್ಮಿಸಿದ ಸಂಸ್ಧೆಗಳು ಈಗ ಭಾರತದ ಆರ್ಥಿಕತೆಯನ್ನು ಚಲಾಯಿಸಲು ಮಾರಲ್ಪಡುತ್ತಿವೆ” ಎಂದು ಅವರು ಟೀಕಿಸಿದರು. “ರಾಷ್ಟ್ರ ನಿರ್ಮಾಣದಲ್ಲಿ ನೆಹರೂ ಹಾಗೂ ಇಂದಿರಾ ಗಾಂಧಿಯವರ ಅಮರ ಕೊಡುಗೆಯನ್ನು ನೀವು ನಾಶಮಾಡಲು ಸಾಧ್ಯವಿಲ್ಲ. ನೆಹರೂ ಕೊಡುಗೆಗಳನ್ನು ನಿರಾಕರಿಸುವವರನ್ನು ಇತಿಹಾಸದ ಖಳನಾಯಕರು ಎಂದು ಕರೆಯಲಾಗುತ್ತದೆ” ಎಂದು ರಾವುತ್ ಕಿಡಿಕಾರಿದ್ರು.