ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ತಮಿಳುನಾಡಿನ ಕುನೂರ್ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾದ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ದೆಹಲಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರಜ್ಞ ವಿಭಾಗದಲ್ಲಿ ಮಧುಲಿಕಾ ಪದವಿ ಸ್ವೀಕರಿಸಿದ್ದರು.
ಜನರಲ್ ಬಿಪಿನ್ ರಾವತ್ ಹಾಗೂ ಮಧುಲಿಕಾ ರಾವತ್ ದಂಪತಿಗೆ ಕೃತಿಕಾ ರಾವತ್ ಹಾಗೂ ಇನ್ನೊಬ್ಬ ಮಗಳಿದ್ದಾರೆ. ಮಧುಲಿಕಾ ರಾವತ್ ಭಾರತದ ಅತೀ ದೊಡ್ಡ ಎನ್ಜಿಓಗಳಲ್ಲಿ ಒಂದಾದ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ನ ಅಧ್ಯಕ್ಷೆಯಾಗಿದ್ದರು. ಈ ಅಸೋಸಿಯೇಷನ್ ಅಧ್ಯಕ್ಷೆಯಾಗಿ ಮಧುಲಿಕಾ ಹುತಾತ್ಮ ಯೋಧರ ಪತ್ನಿಯಂದಿರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದರು.
ಸೇನಾ ಸಿಬ್ಬಂದಿಯ ಪತ್ನಿಯಂದಿರ ಕಲ್ಯಾಣ ಮಾತ್ರವಲ್ಲದೇ ವಿಕಲ ಚೇತನ ಮಕ್ಕಳ ಅಭಿವೃದ್ಧಿಗೂ ಶ್ರಮಿಸಿದ ಕೀರ್ತಿ ಮಧುಲಿಕಾರಿಗೆ ಸೇರುತ್ತದೆ. ಕ್ಯಾನ್ಸರ್ ಪೀಡಿತರ ಶ್ರೇಯೋಭಿವೃದ್ಧಿ ಸೇರಿದಂತೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಮಧುಲಿಕಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಸೇನಾ ಸಿಬ್ಬಂದಿಯ ಪತ್ನಿಯಂದಿರು ಆರ್ಥಿಕವಾಗಿ ಸದೃಢರಾಗಿರಬೇಕು ಎಂಬ ಕಾರಣಕ್ಕೆ ಅವರಿಗೆ ಬ್ಯೂಟಿಷಿಯನ್ ಕೋರ್ಸ್, ಟೇಲರಿಂಗ್ ಕೋರ್ಸ್, ಕೇಕ್ ತಯಾರಿಕೆ , ಬ್ಯಾಗ್ ನಿರ್ಮಾಣ ಹಾಗೂ ನೇಯ್ಗೆ ಕೆಲಸ ಸೇರಿದಂತೆ ಸಾಕಷ್ಟು ವೃತ್ತಿಪರ ಕೋರ್ಸ್ಗಳಿಗೆ ಸೇರುವಂತೆ ಉತ್ತೇಜಿಸುತ್ತಿದ್ದರು. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಮಾತ್ರವಲ್ಲದೇ ಅವರ ಆರೋಗ್ಯದ ಕಡೆಯೂ ಗಮನ ನೀಡುತ್ತಿದ್ದರು.
ವೆಲ್ಲಿಂಗ್ಟನ್ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನತ್ತ ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದಾರೆ. ಈ ದುರಂತದಲ್ಲಿ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ರಾವತ್ ದಂಪತಿ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ.