ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದಾರೆ. ಅವರು ಕನ್ಸರ್ವೇಟಿವ್ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಲಿದ್ದಾರೆ, ಅವರ ಬದಲಿಗೆ ಮತ್ಯಾರಿಗೆ ನಾಯಕತ್ವ, ಯಾರು ಪ್ರಧಾನಿಯಾಗಬಹುದೆಂದು ಪಕ್ಷದೊಳಗೆ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದೆ. ಹಲವಾರು ಸಂಭಾವ್ಯ ಉತ್ತರಾಧಿಕಾರಿ ಹೆಸರು ಕೇಳಿಬಂದರೂ ಯಾವುದೂ ಸ್ಪಷ್ಟವಾಗಿಲ್ಲ.
ಪ್ರಧಾನಿಯಾಗುವ ರೇಸ್ನಲ್ಲಿ ರಿಷಿ ಸುನಕ್ ಹೆಸರು ಕೇಳಿಬಂದಿದೆ, 42 ವರ್ಷದ ಸುನಕ್ ಸಾಮಾಜಿಕ ಮಾಧ್ಯಮದಲ್ಲಿ ಉನ್ನತ ಪ್ರೊಫೈಲ್ ಹೊಂದಿದ್ದಾರೆ, ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯನ್ನು ಹೆಚ್ಚಿಸಿದ್ದಕ್ಕಾಗಿ ಪ್ರಶಂಸೆಯನ್ನು ಸಹ ಗಳಿಸಿದ್ದಾರೆ. ಅದರೂ ಜೀವನಾವಶ್ಯಕ ವಸ್ತು ಬೆಲೆ ಏರಿಕೆ ಅವರ ಜನಪ್ರಿಯತೆಯನ್ನು ಕೊಂಚ ಮಟ್ಟಿಗೆ ಘಾಸಿಗೊಳಿಸಿದೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಅವರು ಮೇ 2015 ರಲ್ಲಿ ರಿಚ್ಮಂಡ್ (ಯಾರ್ಕ್ಸ್)ಗೆ ಕನ್ಸರ್ವೇಟಿವ್ ಸಂಸದರಾಗಿ ಆಯ್ಕೆಯಾದರು, ಇದು ಅವರ ರಾಜಕೀಯ ಪ್ರವೇಶದ ಆರಂಭ.
ರಾಜಕೀಯಕ್ಕೆ ಸೇರುವ ಮೊದಲು ರಿಷಿ ಸುನಕ್ 2001 -2004ರವರೆಗೆ ಪ್ರಮುಖ ಹೂಡಿಕೆ ಬ್ಯಾಂಕ್ನಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು. ಅವರು ಸಿಲಿಕಾನ್ ವ್ಯಾಲಿಯಿಂದ ಬೆಂಗಳೂರಿನವರೆಗೆ ಕಂಪನಿಗಳೊಂದಿಗೆ ಕೆಲಸ ಮಾಡುವ ದೊಡ್ಡ ಹೂಡಿಕೆ ಸಂಸ್ಥೆಯನ್ನು ಸಹ ಸ್ಥಾಪಿಸಿದ್ದಾರೆ.
ಪೂರ್ವ ಆಫ್ರಿಕಾದಿಂದ ವಲಸೆ ಬಂದ ಭಾರತೀಯ ಪೋಷಕರಿಗೆ ಸೌತಾಂಪ್ಟನ್ನಲ್ಲಿ ಜನಿರುವ ಸುನಕ್ ವಿಂಚೆಸ್ಟರ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅವರು ತರುವಾಯ ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಓದಿದರು. ಸ್ಟ್ಯಾನ್ಫೋರ್ಡ್ನಲ್ಲಿ ಓದುತ್ತಿದ್ದಾಗ, ಅವರು ಅಕ್ಷತಾ ಮೂರ್ತಿಯವರನ್ನು ಭೇಟಿಯಾದರು, ಸ್ನೇಹ ಪ್ರೀತಿಗೆ ತಿರುಗಿ ಬಳಿಕ ವಿವಾಹವಾದರು. ಅಕ್ಷತಾ ಮೂರ್ತಿ ಇನ್ಫೋಸಿಸ್ ಸ್ಥಾಪಿಸಿದ ಭಾರತೀಯ ಬಿಲಿಯನೇರ್ ಉದ್ಯಮಿ ಎನ್.ಆರ್. ನಾರಾಯಣಮೂರ್ತಿಯವರ ಮಗಳು.