ರುಚಿಯಾದ ಮೈಸೂರು ಪಾಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಇದನ್ನು ಮಾಡುವುದು ಕಷ್ಟ ಎಂದು ಸುಮ್ಮನಾಗುತ್ತೇವೆ.
ಇಲ್ಲಿ ಸುಲಭವಾಗಿ ಮೈಸೂರು ಪಾಕ್ ಮಾಡುವ ವಿಧಾನವಿದೆ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ಕಡಲೆಹಿಟ್ಟು, 1 ¾ ಕಪ್ – ಸಕ್ಕರೆ, ½ ಕಪ್ – ನೀರು, 1 ಕಪ್ – ತುಪ್ಪ, ½ ಕಪ್ – ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಕಡಲೆಹಿಟ್ಟನ್ನು ಜರಡಿ ಹಿಡಿದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆ ಹಾಕಿ ಬಿಸಿ ಮಾಡಿಟ್ಟುಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ನೀರು ಸೇರಿಸಿ ಒಂದೆಳೆ ಪಾಕ ತಯಾರಿಸಿಕೊಳ್ಳಿ. ನಂತರ ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಸ್ವಲ್ಪ ಸ್ವಲ್ಪವೇ ಹಿಟ್ಟು ಸೇರಿಸಿಕೊಂಡು ಕೈಯಾಡಿಸುತ್ತಾ ಇರಿ.
ನಂತರ ಬಿಸಿ ಮಾಡಿಟ್ಟುಕೊಂಡ ಎಣ್ಣೆ ಹಾಗೂ ತುಪ್ಪವನ್ನು ಒಂದು ಸಣ್ಣ ಸೌಟಿನ ಸಹಾಯದಿಂದ ಈ ಮಿಶ್ರಣಕ್ಕೆ ಹಾಕಿ. ಹೀಗೆ ಎಲ್ಲಾ ತುಪ್ಪ ಖಾಲಿಯಾಗುವವರೆಗೆ ಸ್ವಲ್ಪ ಸ್ವಲವೇ ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ಈ ಮಿಶ್ರಣ ದಪ್ಪಗಾಗುತ್ತಿದ್ದಂತೆ ಗುಳ್ಳೆಯ ರೀತಿ ಬರುತ್ತದೆ. ಆಗ ಗ್ಯಾಸ್ ಆಫ್ ಮಾಡಿ. ತುಪ್ಪ ಸವರಿದ ಪ್ಲೇಟ್ ಗೆ ಇದನ್ನು ಹಾಕಿ 15 ನಿಮಿಷಗಳ ಕಾಲ ಬಿಟ್ಟು ಕತ್ತರಿಸಿಕೊಳ್ಳಿ.