ಆರ್ಡರ್ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಸುನೀಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಸ್ವಿಗ್ಗಿಯ ಡೆಲಿವರಿ ಏಜೆಂಟ್ ರೆಸ್ಟಾರೆಂಟ್ಗೆ ಬಂದು ಗ್ರಾಹಕರು ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿ ನೀಡುವಂತೆ ಹೇಳಿದ್ದ. ಈ ವೇಳೆ ಇನ್ನೂ ಮೂವರು ಇದೇ ರೆಸ್ಟಾರೆಂಟ್ ಬಳಿ ನಿಂತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಸ್ವಿಗ್ಗಿ ಏಜೆಂಟ್ಗೆ ಆರ್ಡರ್ ನೀಡಲು ರೆಸ್ಟಾರೆಂಟ್ ವಿಳಂಬ ಮಾಡಿತ್ತು. ಇದೇ ವೇಳೆ ಮೂವರು ರೆಸ್ಟಾರೆಂಟ್ ಸಿಬ್ಬಂದಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಈ ವಾಗ್ವಾದ ತಾರಕಕ್ಕೇರಿದ್ದು ಸುನೀಲ್ ಅಗರ್ವಾಲ್ನನ್ನು ಗುಂಡಿಕ್ಕಿ ಕೊಲೆಗೈಯಲಾಗಿದೆ.
ಕೂಡಲೇ ಸುನೀಲ್ರನ್ನು ರೆಸ್ಟಾರೆಂಟ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಸುನೀಲ್ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರೆಸ್ಟಾರೆಂಟ್ ಸಮೀಪದಲ್ಲೇ ವಾಸವಿರುವ ರಾಕೇಶ್ ನಾಗರ್, ರೆಸ್ಟಾರೆಂಟ್ ಸಿಬ್ಬಂದಿ ನನಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ರು. ನಾನು ರೆಸ್ಟಾರೆಂಟ್ ತಲುಪುವ ವೇಳೆ ಅವರಿನ್ನೂ ಉಸಿರಾಡುತ್ತಿದ್ದರು. ನಾನು ಪೊಲೀಸರಿಗೆ ಮಾಹಿತಿ ನೀಡಿ ಆ್ಯಂಬುಲೆನ್ಸ್ಗೆ ಕರೆ ಮಾಡಿದೆ. ಬಳಿಕ ನಾವು ನಮ್ಮ ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಎಂದು ಹೇಳಿದ್ದಾರೆ.