ವಾಟ್ಸಾಪ್ನಲ್ಲಿ ಯಾರಾದರೂ ಕಳುಹಿಸಿದ ಸಂದೇಶವನ್ನು ನಮಗೆ ರೀಡ್ ಮಾಡಲು ಇಷ್ಟವಿಲ್ಲದೇ ಹೋದಲ್ಲಿ ಅಥವಾ ವಾಟ್ಸಾಪ್ ಪರದೆಯ ಮೇಲೆ ಅವರ ಚಾಟ್ ಕಾಣಿಸಬಾರದು ಎಂದಾದಲ್ಲಿ ಅರ್ಕೈವ್ ಚಾಟ್ ಎಂಬ ಆಯ್ಕೆಯನ್ನು ಬಳಸಿಕೊಳ್ತೇವೆ. ಈ ಅರ್ಕೈವ್ ಚಾಟ್ ವಿಭಾಗದಲ್ಲಿ ವಾಟ್ಸಾಪ್ ಇದೀಗ ಬಹುಬೇಡಿಕೆಯ ಸುಧಾರಣೆಯೊಂದನ್ನು ತಂದಿದೆ.
ಹಿಂದೆಲ್ಲ ನೀವು ಯಾವುದೇ ಚಾಟ್ನ್ನು ಅರ್ಕೈವ್ ಮಾಡಿದ ಬಳಿಕ ಆ ಕ್ಯಾಂಟಾಕ್ಟ್ನಿಂದ ಹೊಸ ಸಂದೇಶ ಬಂದಲ್ಲಿ ಅರ್ಕೈವ್ ಮಾಡಿದ ಚಾಟ್ ಪುನಃ ವಾಟ್ಸಾಪ್ ಪರದೆಯ ಮೇಲೆ ಕಾಣಿಸಿಕೊಳ್ತಿತ್ತು. ಆದರೆ ಇನ್ಮೇಲೆ ಹಾಗಾಗೋದಿಲ್ಲ. ಅರ್ಕೈವ್ ಮಾಡಲಾದ ಚಾಟ್ಗಳಲ್ಲಿ ಹೊಸ ಸಂದೇಶ ಬಂದರೂ ಸಹ ಅದು ಅನ್ಅರ್ಕೈವ್ ಆಗದೇ ಅರ್ಕೈವ್ ಫೋಲ್ಡರ್ನಲ್ಲಿಯೇ ಇರಲಿದೆ. ಅನೇಕ ಬಳಕೆದಾರರು ಈ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಈ ಅಪ್ಡೇಟ್ ಬಿಡುಗಡೆ ಮಾಡಿದ್ದೇವೆ ಎಂದು ಫೇಸ್ಬುಕ್ ಮಾಲಿಕತ್ವದ ಕಂಪನಿ ಹೇಳಿದೆ.
ಮೊದಲು ಈ ಹೊಸ ಸೌಲಭ್ಯವನ್ನು ಐಫೋನ್ ಬಳಕೆದಾರರಿಗೆ ಮಾತ್ರ ನೀಡಲಾಗಿತ್ತು. ಆದ್ರೀಗ ಆಂಡ್ರಾಯ್ಡ್ ಬಳಕೆದಾರರೂ ಕೂಡ ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ. ಈ ಮೂಲಕ ಅರ್ಕೈವ್ ಫೋಲ್ಡರ್ನಲ್ಲಿರುವ ಚಾಟ್ಗಳನ್ನು ನೀವು ಬಯಸಿದಲ್ಲಿ ಮಾತ್ರ ಪರದೆ ಮೇಲೆ ಕಾಣಿಸುವಂತೆ ಮಾಡಬಹುದಾಗಿದೆ.