ಬಳಕೆದಾರರ ಗೌಪ್ಯತೆ ಯನ್ನು ಕಾಪಾಡುವ ನಿಟ್ಟಿನಲ್ಲಿ ವಾಟ್ಸಾಪ್ ಹೊಸದೊಂದು ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಸೌಲಭ್ಯವು ವಾಟ್ಸಾಪ್ ಬಳಕೆದಾರರ ಖಾಸಗಿತನಕ್ಕೆ ಸಹಾಯವಾಗುವಂತಿದೆ. ವೀವ್ ವನ್ಸ್ ಎಂಬ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ನಲ್ಲಿ ನೀಡಲಾಗಿದ್ದು ಈ ಮೂಲಕ ನೀವು ಯಾರಿಗೆ ಫೋಟೋವನ್ನು ಕಳಿಸಿದರೆ ಅದನ್ನು ಕೇವಲ 1 ಬಾರಿ ಮಾತ್ರ ನೋಡಲು ಸಾಧ್ಯವಾಗುವಂತಿದೆ.
ಐಓಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರಿಬ್ಬರಿಗೂ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗಿದೆ. ಬಳಕೆದಾರರ ಗೌಪ್ಯತೆ ಕಾಪಾಡಲು ಹಾಗೂ ಫೋನಿನಲ್ಲಿ ಅನಗತ್ಯ ಫೋಟೋಗಳ ಶೇಖರಣೆಯನ್ನು ತಪ್ಪಿಸುವ ಸಲುವಾಗಿ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿರೋದಾಗಿ ಕಂಪನಿ ಹೇಳಿದೆ.
ವಾಟ್ಸಾಪ್ ಮೂಲಕ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುವುದು ಹೊಸ ವಿಷಯವೇನಲ್ಲ. ಇದರಿಂದ ನಿಮ್ಮ ಮೊಬೈಲ್ನ ಸ್ಟೋರೇಜ್ ಕೂಡ ತುಂಬುತ್ತದೆ. ಆದರೆ ಈ ಹೊಸ ವೀವ್ ವನ್ಸ್ ಸೌಲಭ್ಯದ ಅಡಿಯಲ್ಲಿ ನೀವು ಯಾವುದೇ ವ್ಯಕ್ತಿಗೆ ಫೋಟೋ ಇಲ್ಲವೇ ವಿಡಿಯೋಗಳನ್ನು ಶೇರ್ ಮಾಡಿದಲ್ಲಿ ಅವರು ಕೇವಲ ಒಂದು ಬಾರಿ ಮಾತ್ರ ಅದನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ಆ ಫೋಟೋ ಹಾಗೂ ವಿಡಿಯೋಗಳು ನಿಮ್ಮ ಮೊಬೈಲ್ ಗ್ಯಾಲರಿಯಲ್ಲಿ ಸೇವ್ ಕೂಡ ಆಗೋದಿಲ್ಲ.
ಈ ವೈಶಿಷ್ಠ್ಯದ ಮೂಲಕ ನಿಮಗೆ ಯಾರೇ ಆಗಲಿ ಫೋಟೋ ಅಥವಾ ವಿಡಿಯೋಗಳನ್ನು ಶೇರ್ ಮಾಡಿದಲ್ಲಿ ನಿಮಗೆ ‘ ವೀವ್ ವನ್ಸ್’ ಎಂಬ ಐಕಾನ್ ರೀತಿಯಲ್ಲಿ ಗೋಚರವಾಗಲಿದೆ. ಇದನ್ನು ನೀವು ಒಪನ್ ಮಾಡುತ್ತಿದ್ದಂತೆಯೇ ಅದು ಮತ್ತೊಮ್ಮೆ ನೋಡಲು ಸಾಧ್ಯವಿಲ್ಲ. ನೋವು ಆ ವಿಡಿಯೋ ಅಥವಾ ಫೋಟೋವನ್ನು ವೀಕ್ಷಿಸಿದ ಬಳಿಕ ವೀವ್ಸ್ ವನ್ಸ್ ಎಂದು ಗೋಚರವಾಗ್ತಿದ್ದ ಆಯ್ಕೆಯು ‘ಓಪನ್ಡ್’ ಎಂದು ತೋರಲಿದೆ. ಇದರಿಂದ ಬಳಕೆದಾರರಿಗೆ ಯಾವುದೇ ಗೊಂದಲ ಉಂಟಾಗೋದಿಲ್ಲ.