
ಕೊರೊನಾ ಪ್ರಕರಣಗಳ ತೀವ್ರ ಏರಿಕೆಯಿಂದ ತತ್ತರಿಸಿರುವ ಕೇರಳದಲ್ಲಿ, ಈಗ ನಿಫಾ ಸೋಂಕಿನ ಅಬ್ಬರ ಆರಂಭವಾಗಿರುವುದು ಜನರಲ್ಲಿ ಭಾರಿ ಆತಂಕ ಮೂಡಿಸಿದೆ. ಕೇಂದ್ರ ಸರ್ಕಾರವು ಕೂಡಲೇ ತಜ್ಞವೈದ್ಯರ ತಂಡವನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ. 2018ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ನಿಫಾ ಸೋಂಕು ಭಾರಿ ಸದ್ದು ಮಾಡಿತ್ತು. ಕೋಯಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ಹರಡಿದ್ದ ಈ ಸೋಂಕು 17 ಜನರನ್ನು ಬಲಿಪಡೆದಿತ್ತು.
ನಿಫಾ ವೈರಾಣು ಸೋಂಕು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವಿಚಿತ್ರ ಕಾಯಿಲೆ. ಹಣ್ಣು ತಿನ್ನುವ ಬಾವಲಿಗಳ ಜೊಲ್ಲಿನಿಂದ ಮನುಷ್ಯರಿಗೆ ಈ ಸೋಂಕು ತಗುಲುತ್ತದೆ. ಬಳಿಕ ಒಬ್ಬ ಸೋಂಕಿತನಿಂದ ಮತ್ತೊಬ್ಬನಿಗೆ ಬರುತ್ತದೆ.
ವಿಪರೀತ ಜ್ವರ, ಕೆಮ್ಮು, ತಲೆನೋವಿನ ಲಕ್ಷಣಗಳಿಂದ ಸೋಂಕು ವ್ಯಕ್ತಿಯನ್ನು ಆವರಿಸುತ್ತದೆ. ಸುಮಾರು 14 ದಿನಗಳ ಕಾಲ ಸೂಕ್ತ ಚಿಕಿತ್ಸೆ, ಆರೈಕೆ, ಔಷಧಗಳು ಲಭ್ಯವಾಗದಿದ್ದರೆ ಸೋಂಕಿತ ಮಿದುಳು ಜ್ವರ ಹೆಚ್ಚಾಗಿ ಕೋಮಾಗೆ ಜಾರಿ ಮೃತಪಡುತ್ತಾನೆ. ಅಷ್ಟು ಮಾರಣಾಂತಿಕ ಕಾಯಿಲೆ ಈ ‘ನಿಫಾ’. 45 ದಿನಗಳವರೆಗೂ ನಿಫಾ ಸೋಂಕು ವ್ಯಕ್ತಿಯನ್ನು ಬಾಧಿಸಬಲ್ಲದು ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ.
ಅಶುಚಿಯಾದ ಪ್ರಾಣಿಗಳು, ಪ್ರಾಣಿ-ಪಕ್ಷಿಗಳು ತಿಂದು ಉಳಿಸಿದ ಆಹಾರ, ಹಣ್ಣುಗಳಿಂದ ಜನರು ದೂರ ಉಳಿಯುವುದು ನಿಫಾ ತಡೆಯಲು ಇರುವ ಮುನ್ನೆಚ್ಚರಿಕೆ. ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವವರು ಕೈಗಳನ್ನು ಆಗಿಂದಾಗ್ಗೆ ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳುತ್ತಿರಬೇಕು. ನಿಫಾ ಸೋಂಕಿನ ಚಿಕಿತ್ಸೆಗೆ ಸೀಮಿತವಾದ ಮತ್ತು ಗರಿಷ್ಠ ಪರಿಣಾಮಕಾರಿ ಔಷಧವನ್ನು ಇನ್ನೂ ಕೂಡ ಸಂಶೋಧನೆ ಮಾಡಲಾಗಿಲ್ಲ. ಸೋಂಕಿನ ಲಕ್ಷಣಗಳನ್ನು ಹತ್ತಿಕ್ಕಲು ಕೆಲವು ಔಷಧಗಳನ್ನು ಪ್ರಯೋಗಿಸಲಾಗುತ್ತದೆ ಅಷ್ಟೇ.