ಪಶ್ಚಿಮ ಬಂಗಾಳದ ನಾಡಿಯಾದ ಮಾಜಿದಿಯಾ ಕಾಲೇಜಿನ ವಿದ್ಯಾರ್ಥಿ ಆರ್ಕೋ ಬಿಸ್ವಾಸ್ ಕೃತಕ ಬುದ್ಧಿಮತ್ತೆ ಆಧರಿತ ಸ್ಮಾರ್ಟ್ ವಿಶನ್ ಗ್ಲಾಸ್ ಅಭಿವೃದ್ಧಿಪಡಿಸಿದ್ದಾರೆ.
ಸೆನ್ಸಾರ್‌ಗಳು, ಮೈಕ್ರೋ ಸ್ಪೀಕರ್‌ಗಳು ಹಾಗೂ ಬ್ಯಾಟರಿಗಳನ್ನು ಅಳವಡಿಸಲ್ಪಟ್ಟ ಈ ಸ್ಮಾರ್ಟ್ ಗ್ಲಾಸ್‌ಗಳು ದೃಷ್ಟಿ ದೋಷ ಇರುವ ಮಂದಿಗೆ ತಮ್ಮ ಸುತ್ತಲಿನ ಪ್ರದೇಶದಲ್ಲಿ ಓಡಾಡಲು ನೆರವಾಗಲಿದ್ದು, ಓದಲು ಹಾಗೂ ಜನರನ್ನು ಗುರುತು ಹಿಡಿಯಲು ಸಹಾಯ ಮಾಡಲಿವೆ.
ಒಂದು ಮೀಟರ್ ದೂರದಲ್ಲಿರುವ ವಸ್ತುಗಳನ್ನು ಗುರುತಿಸುವ ಕ್ಷಮತೆಯನ್ನು ಈ ಗ್ಲಾಸ್‌ಗಳು ಹೊಂದಿದ್ದು, ಸೈರನ್‌ಗಳ ಮೂಲಕ ಜನರಿಗೆ ಈ ವಸ್ತುಗಳ ಇರುವಿಕೆಯ ಬಗ್ಗೆ ಅಲರ್ಟ್ ಮಾಡಲಿವೆ.
ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಸಾಧನವು ಇಂಥದ್ದೇ ದುಬಾರಿ ಸಾಧನಗಳನ್ನು ಖರೀದಿಸಲು ಆಗದ ಮಂದಿಗೆ ನೆರವಾಗಲಿದೆ. ಸಾಮಾನ್ಯವಾಗಿ ಸ್ಮಾರ್ಟ್ ಗ್ಲಾಸುಗಳು 25,000 ರೂ. ಮೇಲ್ಪಟ್ಟು ಬೆಲೆ ಹೊಂದಿರುತ್ತವೆ. ಆದರೆ ಬಿಸ್ವಾಸ್ ಅಭಿವೃದ್ಧಿ ಪಡಿಸಿದ ಈ ಗ್ಲಾಸ್‌ಗಳು ಕೇವಲ 200-300 ರೂ. ಗಳಿಗೆಲ್ಲಾ ದೊರಕಲಿವೆ.
“ಕಾಲೇಜಿನ ಎನ್‌ಎಸ್‌ಎಸ್ ಘಟಕದಲ್ಲಿದ್ದ ವೇಳೆ ದೈಹಿಕ ಸವಾಲುಗಳಿದ್ದ ಜನರಿಗೆ ನೆರವಾಗುತ್ತಿದ್ದ ವಿಶೇಷ ಸಾಧನಗಳನ್ನು ಕಂಡಿದ್ದೇನೆ. ಆದರೆ ದೃಷ್ಟಿ ಸವಾಲಿನ ಮಂದಿಗೆ ಈ ರೀತಿಯ ಯಾವುದೇ ನೆರವು ಇರಲಿಲ್ಲ. ಇದ್ದರೂ ಸಹ ಅದು ಭಾರೀ ದುಬಾರಿಯದ್ದಾಗಿದೆ,” ಎಂದು ಬಿಸ್ವಾಸ್ ಸುದ್ದಿವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಮಾಜಿದಿಯಾ ಮಾರುಕಟ್ಟೆಯಲ್ಲಿ 55 ರೂ. ಗೆ ಸಿಕ್ಕ ವಿಶೇಷ ಸೆನ್ಸಾರ್ ಒಂದನ್ನು ಖರೀದಿ ಮಾಡಿದ ಬಿಸ್ವಾಸ್, ಅದಕ್ಕೆ 10 ರೂ.ನ ಮೈಕ್ರೋ ಸ್ಪೀಕರ್, 15 ರೂ.ನ ಬ್ಯಾಟರಿ ಹಾಗೂ ಇನ್ನಿತರ ವಸ್ತುಗಳನ್ನು ಜೋಡಣೆ ಮಾಡಿ 80 ರೂ.ಗೆಲ್ಲಾ ಸನ್‌ಗ್ಲಾಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.