ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಒತ್ತಿ ಹೇಳಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಯಾರನ್ನೂ ಮತಾಂತರಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಛತ್ತೀಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗ್ವತ್, ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ. ಆದರೆ ಹೇಗೆ ಬದುಕಬೇಕು ಎಂದು ಕಲಿಸುತ್ತೇವೆ. ಇಡೀ ವಿಶ್ವಕ್ಕೆ ಈ ಪಾಠವನ್ನು ನಮ್ಮ ಜನ್ಮಭೂಮಿ ಭಾರತ ಕಲಿಸಿದೆ. ನಮ್ಮ ಪಂಥವು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತೆ. ನಾವು ಯಾರ ಧರ್ಮವನ್ನೂ ಬದಲಾಯಿಸಲು ಒತ್ತಾಯಿಸುವುದಿಲ್ಲ ಎಂದು ಹೇಳಿದರು.
1930ರಿಂದ ದೇಶದಲ್ಲಿ ಮುಸ್ಲಿಂ ಜನಶಕ್ತಿಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜುಲೈ ತಿಂಗಳಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಆರೋಪಿಸಿದ್ದರು.
ಭಾರತವನ್ನು ಮತ್ತೊಂದು ಪಾಕಿಸ್ತಾನವನ್ನಾಗಿ ಮಾಡುವ ಉದ್ದೇಶದಿಂದ ಮುಸ್ಲಿಂಮರ ಪ್ರಾಬಲ್ಯವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದೆ. ಪಂಜಾಬ್, ಸಿಂಧ್, ಆಸ್ಸಾಂ, ಹಾಗೂ ಪಶ್ಚಿಮ ಬಂಗಾಳದಲ್ಲಿ 1930ರಿಂದಲೇ ಇಂತಹ ಪ್ರಯತ್ನಗಳು ನಡೆಯುತ್ತಿದೆ. ಅಲ್ಲದೇ ಇದು ನಿರ್ದಿಷ್ಟ ಮಟ್ಟದಲ್ಲಿ ಯಶಸ್ವಿ ಕೂಡ ಆಗಿದೆ ಎಂದು ಆತಂಕ ಹೊರಹಾಕಿದ್ದರು.
ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗ್ವತ್, ಎಲ್ಲಾ ಭಾರತ ವಾಸಿಗಳ ಡಿಎನ್ಎ ಒಂದೇ ಆಗಿದೆ. ಹೀಗಾಗಿ ಅವರು ಯಾವ ಧರ್ಮವನ್ನು ಆರಾಧಿಸುತ್ತಾರೆ ಎಂಬುದರ ಮೇಲೆ ಅವರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಮರು ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ತಪ್ಪು ತಿಳುವಳಿಕೆಯನ್ನು ಬಿಟ್ಟು ಬಿಡಿ ಎಂದು ಕರೆ ನೀಡಿದ್ದರು.