ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಹಾಡಹಗಲೇ ನಡೆದ ಕುಖ್ಯಾತ ರೌಡಿ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರ ಹತ್ಯೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ಕೊಲೆಯಲ್ಲಿ ಅಂತ್ಯವಾಗಿರುವ ಗ್ಯಾಂಗ್ವಾರ್ ಇದೀಗ ಸೋಶಿಯಲ್ ಮೀಡಿಯಾಕ್ಕೂ ಕಾಲಿಟ್ಟಿದೆ.
ಈ ಬದ್ಧ ವೈರಿಗಳು ಸೋಶಿಯಲ್ ಮೀಡಿಯಾದ ಮೂಲಕ ನಡುರಸ್ತೆಯಲ್ಲಿ ರಕ್ತದ ಕೋಡಿ ಹರಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮೆಸೇಜ್ನಲ್ಲಿ, ನಾವು ಸುಮ್ಮನಿದ್ದೇವೆ ಎಂದ ಮಾತ್ರಕ್ಕೆ ಸತ್ತಿದ್ದೇವೆ ಎಂದು ಅರ್ಥವಲ್ಲ. ಶೀಘ್ರದಲ್ಲೇ ದೊಡ್ಡ ಪರಿಣಾಮಗಳನ್ನು ಎದುರಿಸಲಿದ್ದೀರಿ. ಬೀದಿಯಲ್ಲಿ ಹರಿಯುವ ರಕ್ತವನ್ನೂ ನಾವು ಒಣಗಲು ಬಿಡುವುದಿಲ್ಲ. ಆಟದ ನಿಯಮ ಬದಲಾಗಿದೆ ಎಂದು ಬರೆಯಲಾಗಿದೆ.
ಸೆಪ್ಟೆಂಬರ್ 21ರಂದು ನಟೋರಿಯಸ್ ಗ್ಯಾಂಗ್ಸ್ಟರ್ ಜಿತೇಂದ್ರ ಮಾನ್ ಅಲಿಯಾಸ್ ಗೋಗಿ ಎಂಬಾತನನ್ನು ರೋಹಿಣಿ ಕೋರ್ಟ್ನಲ್ಲಿ ಹತ್ಯೆಗೈಯಲಾಗಿತ್ತು. ವಕೀಲರ ವೇಷದಲ್ಲಿ ಕೋರ್ಟ್ಗೆ ನುಗ್ಗಿದ್ದ ದಾಳಿಕೋರರು ಗೋಗಿ ಹತ್ಯೆಗೈದಿದ್ದರು.
ದಾಳಿಕೋರರು ಒಬ್ಬರಿಗೊಬ್ಬರು ಬೆದರಿಕೆಯೊಡ್ಡುತ್ತಿರುವ ಈ ಪರಿಸ್ಥಿತಿಯು ದೆಹಲಿ ಪೊಲೀಸರನ್ನು ಆತಂಕಕ್ಕೀಡುಮಾಡಿದೆ. ಮೂಲಗಳ ಪ್ರಕಾರ ಕೊಲೆಯಾದ ಗೋಗಿಯು ಕಲಾ ಜಥೇರಿ ಹಾಗೂ ಲಾರೆನ್ಸ್ ಬಿಷ್ಣೋಯ್ ಆಪ್ತನಾಗಿದ್ದನು. ಹೀಗಾಗಿ ಈ ಬೆದರಿಕೆ ಸಂದೇಶದ ಹಿಂದೆ ಇವರಿಬ್ಬರೇ ಇದ್ದಾರೆ ಎಂದು ತಿಳಿದುಬಂದಿದೆ.
ಗೋಗಿಯ ಮೃತದೇಹದ ಫೋಟೋದ ಜೊತೆಗೆ ಈ ಸಂದೇಶವನ್ನು ಪೋಸ್ಟ್ ಮಾಡಲಾಗ್ತಿದೆ. ಒಂದರಲ್ಲಿ, ಇದು ಹೊಸ ಯುದ್ಧದ ಆರಂಭವಾಗಿದೆ. ನಮ್ಮ ವಿರುದ್ಧ ಯಾರ್ಯಾರು ಇದ್ದಾರೋ ಅವರೆಲ್ಲ ಇನ್ಮೇಲೆ ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಯುದ್ಧದಲ್ಲಿ ಈಗ ಯಾರೂ ಸುರಕ್ಷಿತವಲ್ಲ. ಇಂದಿನಿಂದ ಬೀದಿಯಲ್ಲಿ ರಕ್ತವು ಒಣಗುವ ಮಾತೇ ಇಲ್ಲ. ಯುದ್ಧದ ನಿಯಮ ಇದೀಗ ಬದಲಾಗಿದೆ ಎಂದು ಬರೆಯಲಾಗಿದೆ.