alex Certify ನ.30ರವರೆಗೆ ತುಂಗಭದ್ರಾ ನದಿಯಿಂದ ಕಾಲುವೆಗೆ ನೀರು ಬಿಡುಗಡೆ : ಸಚಿವ ಶಿವರಾಜ್ ತಂಗಡಗಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ.30ರವರೆಗೆ ತುಂಗಭದ್ರಾ ನದಿಯಿಂದ ಕಾಲುವೆಗೆ ನೀರು ಬಿಡುಗಡೆ : ಸಚಿವ ಶಿವರಾಜ್ ತಂಗಡಗಿ ಮಾಹಿತಿ

ಕೊಪ್ಪಳ :ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮೊದಲನೇ ಬಾರಿಗೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 119ನೇ ನೀರಾವರಿ ಸಲಹಾ ಸಮಿತಿ ಸಭೆ ಆಗಸ್ಟ್ 16ರಂದು ನಡೆಯಿತು.

ಮುನಿರಾಬಾದ್ ಕಾಡಾ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವರು, ನೀರಾವರಿ ಸಲಹಾ ಸಮಿತಿ ಸಭೆಯ ಸದಸ್ಯರ ಸಮ್ಮುಖದಲ್ಲಿ ಮೊದಲಿಗೆ ಕೊಪ್ಪಳ, ಬಳ್ಳಾರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ರೈತ ಮುಖಂಡರೊಂದಿಗೆ ಸಭೆ ನಡೆಸಿ ಅವರಿಂದ ಸಲಹೆ ಪಡೆದುಕೊಂಡರು.

ದಿನೇದಿನೆ ಜನಸಂಖ್ಯೆ ಏರುತ್ತಿರುವುದರಿಂದ ಇದೀಗ ಕೃಷಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ಸಿಗುತ್ತಿದೆ. ಬಹುಕೋಟಿ ಜನರಿಗೆ ಆಹಾರ ಪೂರೈಕೆಗೆ ಕೃಷಿಯೇ ಮೂಲಧಾರವಾಗಿದೆ. ಇದನ್ನು ಗಮನದಲ್ಲಿರಿಸಿ ಈ ಭಾಗದ ರೈತರ ಹಿತರಕ್ಷಣೆ ಕಾಪಾಡಬೇಕು. ತುಂಗಭದ್ರಾ ನದಿಯ ನೀರನ್ನೇ ನಂಬಿ ಬದುಕು ಸಾಗಿಸುವ ಈ ಭಾಗದ ರೈತರಿಗೆ ಅನ್ಯಾಯವಾಗದ ಹಾಗೆ ಕೊನೆಯ ಅಂಚಿನ ಪ್ರದೇಶದವರೆಗೆ ಜಲಾಶಯದಿಂದ ನೀರು ಸಮರ್ಪಕ ಪೂರೈಕೆಯಾಗಬೇಕು. ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ರೈತ ಮುಖಂಡರು ಸಭೆಗೆ ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷರು ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕಳೆದ 10 ವರ್ಷಗಳಲ್ಲಿ ಜಲಾಶಯದಲ್ಲಿನ ನೀರಿನ ಸಂಗ್ರಹಣೆ ಪ್ರಮಾಣದಲ್ಲಿ ಏರುಪೇರಾಗಿದೆ. ಆಗಸ್ಟ್ ಮಾಹೆವರೆಗೆ ನೀರಿನ ಸಂಗ್ರಹಣೆಯು 2014ರಲ್ಲಿ 100.85 ಟಿಎಂಸಿನಷ್ಟು ಇತ್ತು. 2022ರಲ್ಲಿ 104.222 ಟಿಎಂಸಿ ದಾಖಲಾಗಿತ್ತು. ಇದೀಗ 2023ರ ಆಗಸ್ಟ್ 16ರವರೆಗೆ ಕೇವಲ 88.25 ಟಿಎಂಸಿ ನೀರು ಮಾತ್ರ ಸಂಗ್ರಹಣೆಯಾಗಿದೆ. 2023-24ನೇ ಸಾಲಿನಲ್ಲಿ ರಾಯ ಮತ್ತು ಬಸವಣ್ಣ ಕಾಲುವೆಗಳಿಗೆ 2023ರ ಜೂನ್ 1ರಿಂದಲೇ ನೀರು ಹರಿಸಲಾಗುತ್ತಿದೆ. ಮುಂಗಾರು ಹಂಗಾಮಿನ ಮಳೆ ವಿಳಂಬವಾಗಿದ್ದರಿಂದ ಜನಪ್ರತಿನಿಧಿಗಳು ಮತ್ತು ರೈತರ ಬೇಡಿಕೆಯಂತೆ ಆಗಸ್ಟ್ 3ರಿಂದಲೇ ಎಲ್ಲಾ ಕಾಲುವೆಗಳಿಗೆ ನೀರು ಬಿಡಲಾಗಿದೆ. ಮಳೆ ಕೊರತೆಯಿಂದಾಗಿ ಜನ ಜಾನುವಾರುಗಳಿಗೆ ಅನುಕೂಲವಾಗಲು 0.50 ಟಿಎಂಸಿ ನೀರನ್ನು ನದಿಗೆ ಬಿಡಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ಬಳ್ಳಾರಿ ಜಿಲ್ಲೆಗೆ 0.018 ಟಿಎಂಸಿ, ರಾಯಚೂರು ಜಿಲ್ಲೆಗೆ 1.801 ಟಿಎಂಸಿ ನೀರು ಬಿಡಲಾಗಿದೆ. ತುಂಗಭದ್ರಾ ಜಲಾಯಶಯದಿಂದ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಯಾವುದೇ ಭಾಗದ ರೈತರು ಆತಂಕಪಡಬಾರದು. ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಅಭಯ ನೀಡಿದರು.

ರೈತ ಮುಖಂಡರ ಸಲಹೆ ಪಡೆದ ಬಳಿಕ ಸಚಿವರು, ನೀರಾವರಿ ಸಲಹಾ ಸಮಿತಿಯ ಸದಸ್ಯರಾದ ವಿವಿಧ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೃಷಿ ಅಧಿಕಾರಿಗಳು, ಕರ್ನಾಟಿಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಳೊಂದಿಗೆ ಸಭೆ ನಡೆಸಿದರು.

1962-1963ನೇ ಸಾಲಿನಿಂದ 2022-23ನೇ ಸಾಲಿನವರೆಗೆ 60 ವರ್ಷಗಳಲ್ಲಿ ಜಲಾಶಯಕ್ಕೆ ವಾರ್ಷಿಕವಾಗಿ ಹರಿದು ಬಂದ ನೀರಿನ ಪ್ರಮಾಣ ಶೇ.75ರ ಅವಲಂಬನೆ ಆಧಾರದ ಮೇಲೆ ಪರಿಗಣಿಸಿ 2023-24ನೇ ಸಾಲಿನಲ್ಲಿ 175.00 ಟಿಎಂಸಿ ನೀರು ಲಭ್ಯವಾಗಬಹುದೆಂದು ಅಂದಾಜಿಸಲಾಗಿದೆ. 175.00 ಟಿಎಂಸಿ ಎದುರಾಗಿ ಕರ್ನಾಟಕಕ್ಕೆ 114.732 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 54.894 ಟಿಎಂಸಿ ಮತ್ತು ತೆಲಂಗಾಣಕ್ಕೆ 5.374 ಟಿಎಂಸಿ ಲಭ್ಯವಾಗಬಹುದೆಂದು ಲೆಕ್ಕಾಚಾರ ಮಾಡಲಾಗಿದೆ. ಸದ್ಯ ಆಗಸ್ಟ್ 16 ಕೊನೆಗೊಂಡಂತೆ ತುಂಗಭದ್ರಾ ಜಲಾಯಶಯದಲ್ಲಿ ನೀರಿನ ಮಟ್ಟ 1628.42 ಅಡಿಯಿದೆ. 88.25 ಟಿಎಂಸಿಯಷ್ಟು ನೀರಿದೆ. ಒಳ ಹರಿವಿನ ಪ್ರಮಾಣ 5,160 ಕ್ಯೂಸೆಕ್ ಮತ್ತು ಹೊರ ಹರಿವಿನ ಪ್ರಮಾಣ 9797 ಕ್ಯೂಸೆಕ್ ಇದೆ ಎಂದು ಕರ್ನಾಟಕ ರಾಜ್ಯ ನೀರಾವರಿ ನಿಗಮ ನಿಯಮಿತದ ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರರಾದ ಮತ್ತು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಎಲ್ ಬಸವರಾಜ ಅವರು ಸಭೆಗೆ ಮಾಹಿತಿ ನೀಡಿದರು.

2023-24ನೇ ಸಾಲಿನ ಮುಂಗಾರು ಹಂಗಾಮಿಗೆ ನೀರು ಬಿಡುವ ಕಾಲಾವಧಿ, ಬೆಳೆಗಳು ಹಾಗೂ ಕ್ಷೇತ್ರಗಳ ವಿವರಗಳು, ಆಯಾ ಕಾಲುವೆಗಳಿಗೆ ನಿಗದಿಪಡಿಸಿದ ಬೆಳೆಗಳು, ಬೆಳೆಯ ಕಾಲಾವಧಿ, ಮುಂಗಾರು ಹಂಗಾಮಿನ ಅಧಿಸೂಚಿತ ಅಚ್ಚುಕಟ್ಟು ಪ್ರದೇಶದ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳು ಪ್ರಾತ್ಯಕ್ಷಿಯೆ ಮೂಲಕ ಸಭೆಗೆ ಸಮಗ್ರ ಮಾಹಿತಿ ನೀಡಿದರು.

ಮುಂಗಾರು ಮಳೆಗಳು ಸಮರ್ಪಕವಾಗಿ ಸುರಿಯದ ಕಾರಣ ರೈತರು ಕಂಗಾಲಾಗಿದ್ದಾರೆ. ಜಲಾಶಯದ ನೀರನ್ನೇ ಅವಲಂಭಿಸಿದ್ದಾರೆ. ಆಯಾ ಭಾಗದ ರೈತರ ಬೇಡಿಕೆಯನುಸಾರ ನೀರು ಸಿಗುವಂತಾಗಬೇಕು. ಮುಂಗಾರು ಹಂಗಾಮಿಗೆ ವಿವಿಧ ಕಾಲುವೆಯಡಿ ಬರುವ ನೀರಾವರಿ ಕ್ಷೇತ್ರಕ್ಕೆ ಬೆಳೆಯಬಹುದಾದ ಬೆಳೆಗಳನ್ನು, ಈಗಾಗಲೇ ಹರಿಬಿಡಲಾದ ಪ್ರಮಾಣಕ್ಕೆ ಅನುಗುಣವಾಗಿಯೇ ನೀರಾವರಿ ವೇಳಾಪಟ್ಟಿ ಸಿದ್ಧವಾಗಬೇಕು. ಹಾಗಾದಲ್ಲಿ ಎಲ್ಲಾ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ನೀರಾವರಿ ಸಲಹಾ ಸಮಿತಿ ಸದಸ್ಯರು ಆಗಿರುವ ಸಚಿವರು, ಸಂಸದರು, ವಿವಿಧ ಕ್ಷೇತ್ರಗಳ ಶಾಸಕರು ಸಭೆಗೆ ಹಲವಾರು ಸಲಹೆಗಳನ್ನು ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...