ಡ್ರಗ್ಸ್ ಪತ್ತೆ ದಾಳಿಗಿಳಿದ ಖಾಕಿ ಪಡೆ ಮಾಡಿದ ಕೃತ್ಯಕ್ಕೆ ಬೆಚ್ಚಿಬಿದ್ದ ಜನ…..! ಇದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ
01-09-2024 3:04PM IST
/
No Comments /
Posted In: Latest News , India , Live News , Crime News
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯನ್ನು ನೀವು ಕೇಳಿರಬಹುದು. ಮುಂಬೈನಲ್ಲಿ ಇಂತಹ ಘಟನೆಯನ್ನು ಸಾರ್ವಜನಿಕರು ಕಣ್ಣಾರೆ ಕಂಡಿದ್ದಾರೆ.
ದಾಳಿ ವೇಳೆ ವ್ಯಕ್ತಿಯೊಬ್ಬನ ಜೇಬಿನಲ್ಲಿ ಪೊಲೀಸರೇ ಡ್ರಗ್ಸ್ ಹಾಕಿ ಅವರನ್ನು ಬಂಧಿಸಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ಜನ ಪೊಲೀಸರ ಬಳಿ ಹೋದರೆ ನ್ಯಾಯ ಸಿಗುತ್ತದೆಂಬ ನಂಬಿಕೆಯನ್ನೇ ಸುಳ್ಳಾಗಿಸಿದೆ.
ಪೊಲೀಸರ ಈ ಕೃತ್ಯದ ವಿಡಿಯೋ ವೈರಲ್ ಆದ ನಂತರ ನಾಲ್ವರು ಮುಂಬೈ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮುಂಬೈ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳದ ಸಬ್ ಇನ್‌ಸ್ಪೆಕ್ಟರ್ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ನಗರದ ಕಲಿನಾ ಪ್ರದೇಶದಲ್ಲಿ ಮಫ್ತಿಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ದಾಳಿ ನಡೆಸುತ್ತಿರುವುದನ್ನು ತೋರಿಸುವ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಾಳಿಯ ಸಮಯದಲ್ಲಿ ಒಬ್ಬ ಅಧಿಕಾರಿಯು ವ್ಯಕ್ತಿಯ ಪ್ಯಾಂಟ್ ಜೇಬಿನೊಳಕ್ಕೆ ಅನುಮಾನಾಸ್ಪದ ವಸ್ತು ಹಾಕುವುದನ್ನ ಕಾಣಬಹುದು.
ಖಾರ್ ಪೊಲೀಸ್ ಠಾಣೆಯ ಭಯೋತ್ಪಾದನಾ ನಿಗ್ರಹ ದಳಕ್ಕೆ ಸೇರಿದ ನಾಲ್ವರು ಪೊಲೀಸರು ಶುಕ್ರವಾರ ಸಂಜೆ ನಗರದ ಕಲಿನಾ ಪ್ರದೇಶದಲ್ಲಿ ದಾಳಿ ನಡೆಸಿ ಡೇನಿಯಲ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.
ವೀಡಿಯೊ ವೈರಲ್ ಆದ ನಂತರ, ಡೇನಿಯಲ್ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದರು ಎಂದಿದ್ದಾರೆ. ಆದರೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದ ದೃಶ್ಯ ವೈರಲ್ ಆದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಡೇನಿಯಲ್ ಅವರ ಸಹವರ್ತಿಯಾಗಿರುವ ವ್ಯಕ್ತಿಯೊಬ್ಬ, ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುತ್ತಾ ಘಟನೆ ನಡೆದ ಜಾಗಕ್ಕೆ ಸಂಬಂಧಿಸಿದ ವಿವಾದದ ಕುರಿತು ಬಿಲ್ಡರ್‌ನ ಆಜ್ಞೆಯಂತೆ ಪೊಲೀಸರು ವರ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ, ನಾಲ್ವರು ಪೊಲೀಸರನ್ನು ಇಲಾಖಾ ವಿಚಾರಣೆಗಾಗಿ ಅಮಾನತುಗೊಳಿಸಲಾಗಿದೆ ವೀಡಿಯೊದಲ್ಲಿ ಕಂಡುಬರುವ ಶಂಕಿತ ಕ್ರಮಗಳಿಗಾಗಿ ಅವರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ XI) ರಾಜ್ತಿಲಕ್ ರೋಷನ್ ಹೇಳಿದರು.