ಅಪ್ಪ-ಅಮ್ಮ ಎಂದರೆ ಹಾಗೇನೆ. ಅವರ ಪ್ರೀತಿಗೆ ಎಣೆಯೇ ಇಲ್ಲ. ಮಕ್ಕಳನ್ನು ಸಂತೋಷವಾಗಿಡಲು ಅವರು ಸಕಲ ರೀತಿಯ ಪ್ರಯತ್ನ ಮಾಡುತ್ತಾರೆ. ತಾವು ಎಷ್ಟೇ ಕಷ್ಟಪಟ್ಟರೂ ಮಕ್ಕಳು ಸುಖವಾಗಿ ಇರಲಿ ಎಂದು ಬಯಸುವವರೇ ಹಲವರು. ಅಂಥದ್ದೇ ಒಂದುವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.
ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಸರ್ಪ್ರೈಸ್ ನೀಡಿದ್ದಾಳೆ. ದೊಡ್ಡದಾದ ಮನೆಯೊಂದರ ಮುಂದೆ ಕಾರಿನಲ್ಲಿ ಕರೆದುಕೊಂಡು ಹೋಗುವ ತಾಯಿ ಅದು ತಮ್ಮದೇ ಮನೆ ಎಂದಾಗ ಅರೆಕ್ಷಣ ಮಗ ಗೊಂದಲಕ್ಕೆ ಬೀಳುವುದು, ನಂತರ ಜೋರಾಗಿ ಅಳುವ ದೃಶ್ಯ ಈ ವಿಡಿಯೋದಲ್ಲಿ ಇದೆ.
ಇದ್ಯಾಕೆ ಇಲ್ಲಿ ಕಾರು ನಿಲ್ಲಿಸಿದೆ ಎಂದು ಮಗ ಕೇಳಿದಾಗ ತಾಯಿ ಮನೆ ತೋರಿಸುತ್ತಾಳೆ. ಮಗ ಆ ಕ್ಷಣದಲ್ಲಿ ನಂಬಲೇ ಇಲ್ಲ. ಕೊನೆಗೆ ತಾಯಿ ನಿಜವಾಗಿಯೂ ಇದು ನಮ್ಮದೇ ಮನೆ ಎಂದಾಗ ಮಗ ಭಾವುಕನಾಗಿ ಜೋರಾಗಿ ಅಳುತ್ತಾನೆ. ಅಮ್ಮನ ಪ್ರೀತಿಗೆ ಸಾಟಿಯೇ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.