ಪ್ಯಾರೀಸ್: ಫ್ಯಾಶನ್ ಷೋ ಗಳು ಎಂದರೆ ಅಲ್ಲಿ ಚಿತ್ರ ವಿಚಿತ್ರ ಬಟ್ಟೆಗಳು ನೋಡಲು ಸಿಗುತ್ತವೆ. ಅಂಥದ್ದೇ ವಿಚಿತ್ರ ಉಡುಗೆಯ ವಿಡಿಯೋ ಒಂದು ವೈರಲ್ ಆಗಿದೆ.
ಪ್ಯಾರಿಸ್‌ನಲ್ಲಿ ಶಿಯಾಪರೆಲ್ಲಿಯ ಕೌಚರ್ ರನ್‌ವೇಯಲ್ಲಿ ನಡೆದ ಫ್ಯಾಷನ್ ಷೋ ಇದಾಗಿದೆ. ಸಿಂಹದ ತಲೆಯಿರುವ ಉಡುಗೆಯೊಂದು ತೊಟ್ಟಿರುವ ರೂಪದರ್ಶಿ ಕೈಲೀ ಜೆನ್ನರ್ ಅವರ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದೀಗ ಅದಕ್ಕೂ ವಿಚಿತ್ರ ಎನಿಸುವ ಬಟ್ಟೆಯೊಂದರ ವಿಡಿಯೋ ವೈರಲ್ ಆಗಿದೆ.
ಡಿಸೈನರ್ ನಾನ್ನಾ ಮತ್ತು ಸೈಮನ್ ಎನ್ನುವವರು ಕೋಪನ್ ಹೇಗನ್ ಫ್ಯಾಶನ್ ವೀಕ್‌ನಲ್ಲಿ ವಿಚಿತ್ರವಾಗಿ ಡಿಸೈನ್ ಮಾಡಿರುವ ಡ್ರೆಸ್ ಇದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದರ ವಿಡಿಯೋ ವೈರಲ್ ಅಗಿದೆ. ವೀಡಿಯೊದಲ್ಲಿ, ರೂಪದರ್ಶಿ ಸಾರಾ ಡಹ್ಲ್ ಇತರ ಅತಿಥಿಗಳೊಂದಿಗೆ ಮೇಜಿನ ಬಳಿ ಕುಳಿತಿರುವುದನ್ನು ನೋಡಬಹುದು. ನಂತರ ಆಕೆ ವೈನ್ ಗ್ಲಾಸ್ಮೇಲೆ ಚಮಚದಿಂದ ಕುಟ್ಟಿ ಎಲ್ಲರ ಗಮನ ಸೆಳೆಯುತ್ತಾಳೆ.
ಕೂಡಲೇ ಕ್ಯಾಟ್ ವಾಕ್ ಮಾಡುತ್ತಾ ಹೋಗುತ್ತಾಳೆ. ಆಕೆಯ ಡ್ರೆಸ್ ಟೇಬಲ್ ಕ್ಲಾತ್ನಿಂದ ಮಾಡಿದ್ದು. ಅದರ ಹಿಂಭಾಗದಲ್ಲಿ ಅರ್ಧ-ತಿನ್ನಲಾದ ಆಹಾರದ ತಟ್ಟೆಗಳು, ಮೇಣದಬತ್ತಿ, ಸಿಗರೇಟ್ ತುಂಡುಗಳು ಮತ್ತು ವೈನ್ ಗ್ಲಾಸ್ ಕಲೆಗಳು ಇರುವುದನ್ನು ನೋಡಬಹುದು. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟುವುದನ್ನು ಕೇಳಬಹುದು. ಇದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಕಣ್ಣಿನಿಂದ ಇನ್ನು ಏನೇನು ನೋಡಬೇಕೋ ಎನ್ನುತ್ತಿದ್ದಾರೆ.