ಯಾವುದೇ ಆಕ್ಷನ್ ಮೂವಿಗೂ ಕಮ್ಮಿ ಇಲ್ಲದಂತೆ ಕಾಣುವ ವಿಡಿಯೋವೊಂದರಲ್ಲಿ ಚೀತಾವೊಂದಕ್ಕೆ ಹೆಲಿಕಾಪ್ಟರ್‌ನಿಂದ ಅರವಳಿಕೆ ನೀಡುವುದನ್ನು ನೋಡಬಹುದಾಗಿದೆ.
ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ ಚೀತಾ ತನ್ನ ಗರಿಷ್ಠ ಸಾಮರ್ಥ್ಯದಲ್ಲಿ ಮೈಲುಗಟ್ಟಲೇ ಓಡುವುದನ್ನು ನೋಡಬಹುದಾಗಿದೆ. ಉರಿ ಬಿಸಿಲಿನ ನಡುವೆ ಚೀತಾಗಳಿಗೆ ಅಗತ್ಯವಾಗಿ ಬೇಕಾದ ಆರೈಕೆಯಲ್ಲಿ ತೊಡಗಿರುವ ವನ್ಯಜೀವಿ ಸಿಬ್ಬಂದಿ ಪವನ್ ಹೆಸರಿನ ಈ ಚೀತಾಗೆ ಅರವಳಿಕೆ ನೀಡಿದ್ದಾರೆ.
ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಕರೆ ತರಲಾದ ಚೀತಾಗಳ ಪೈಕಿ ಒಬ್ಬನಾದ ಪವನ್ ತನ್ನ ಉದ್ದೇಶಿತ ಆವಾಸ ಸ್ಥಾನದಿಂದ ಆಚೆಗೆ ಓಡಿ ಹೋಗುತ್ತಿದ್ದ ವೇಳೆ ಆತನನ್ನು ಸುರಕ್ಷಿತ ಸ್ಥಳದೆಡೆಗೆ ಮರಳಿ ಕರೆ ತರಲಾಗಿದೆ. ತನ್ನ ಹೊಸ ಆವಾಸ ಸ್ಥಾನದಿಂದ ಹೊರಗೋಡುವ ಚಾಳಿ ಬೆಳೆಸಿಕೊಂಡಿರುವ ಪವನ್ ಆಗಾಗ ಮದ್ಯ ಪ್ರದೇಶದ ಗಡಿ ದಾಟಿ ಉತ್ತರ ಪ್ರದೇಶದತ್ತ ಓಡುತ್ತಲೇ ಇರುತ್ತಾನೆ ಎಂದು ತಿಳಿದು ಬಂದಿದೆ.
1952ರಲ್ಲಿ ಭಾರತದಲ್ಲಿ ಚೀತಾಗಳು ಸಂಪೂರ್ಣವಾಗಿ ವಿನಾಶಗೊಂಡಿವೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಏಷ್ಯಾಟಿಕ್ ಚೀತಾಗಳ ಬದಲಿಗೆ ಈಗ ದೇಶದ ವನ್ಯಸಂಕುಲಕ್ಕೆ ಆಫ್ರಿಕನ್ ಚೀತಾಗಳನ್ನು ಪರಿಚಯಿಸುವ ನಡೆಯಲ್ಲಿ, ಸೆಪ್ಟೆಂಬರ್ 17, 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಚೀತಾಗಳನ್ನು ಅರಣ್ಯದೊಳಗೆ ಬಿಡುಗಡೆ ಮಾಡಿದ್ದರು.