ಪೋಷಕರು ಮಕ್ಕಳಿಗೆ ಉಡುಗೊರೆ ಕೊಡೋದು ಹೊಸದಲ್ಲ. ಆದರೆ ವಯಸ್ಸಾದ ಪೋಷಕರಿಗೆ ಮಕ್ಕಳು ತಂದು ಕೊಡುವ ಚಿಕ್ಕ ಚಿಕ್ಕ ಉಡುಗೊರೆಯೂ ಸ್ಪೆಷಲ್ ಎನಿಸುತ್ತದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತದ್ದೇ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ತ್ರಿಶೂರ್ ಜಿಲ್ಲೆಯ 84 ವರ್ಷದ ಅಚ್ಯುತನ್ ನಾಯರ್ ಎಂಬವರಿಗೆ ಮಕ್ಕಳು ವಿಶೇಷವಾದ ಉಡುಗೊರೆ ನೀಡಿದ್ದಾರೆ.
ನಾಯರ್ರ ಮಕ್ಕಳಾದ ಸುಜಿತ್ ಹಾಗೂ ಅಜಿತ್ ತಮ್ಮ ತಂದೆಗೆ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಬರೋಬ್ಬರಿ ಐದು ದಶಕಗಳ ಹಿಂದೆ ನಾಯರ್ ಚಲಾಯಿಸಿದ್ದ ಹಿಂದೂಸ್ತಾನ್ ಅಂಬಾಸಿಡರ್ ಕಾರನ್ನು ಮಕ್ಕಳು ಉಡುಗೊರೆಯಾಗಿ ನೀಡಿದ್ದು ಈ ಕಾರನ್ನು ನೋಡಿದ ನಾಯರ್ ಭಾವುಕರಾಗಿದ್ದಾರೆ.
ಯುಟ್ಯೂಬ್ ಚಾನೆಲ್ ಒಂದರಲ್ಲಿ ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಶೇರ್ ಮಾಡಲಾಗಿದ್ದು ಈ ವಿಡಿಯೋ ವೈರಲ್ ಆಗಿದೆ. 1970ರ ಸಮಯದಲ್ಲಿ ವೈದ್ಯರ ಬಳಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅಚ್ಯುತ್ ನಾಯರ್ ಈ ಕಾರನ್ನು ಚಲಾಯಿಸಿದ್ದರು ಎನ್ನಲಾಗಿದೆ. ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರನ್ನು ಹೊಂದುವುದು ಪ್ರತಿಷ್ಠೆಯ ಸಂಕೇತವಾಗಿತ್ತು.
ಈ ಕಾರು ನಾಯರ್ಗೆ ಕೇವಲ ಒಂದು ವಾಹನವಾಗಿರಲಿಲ್ಲ. ಇದು ವಿಶೇಷ ಸಂದರ್ಭದಲ್ಲಿ ಅವರ ನೆರೆಹೊರೆಯವರಿಗೂ ಸಹಾಯ ಮಾಡುವ ವಾಹನವಾಗಿತ್ತು. ಈ ಕಾರು ನಾಯರ್ ಕುಟುಂಬಸ್ಥರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿತ್ತು. ತಲೆಮಾರುಗಳ ನೆನಪನ್ನು ಈ ಕಾರು ಹೊಂದಿತ್ತು ಎನ್ನಲಾಗಿದೆ.