ಎರಡು ವರ್ಷದ ಬಳಿಕ ದೆಹಲಿಯಲ್ಲಿ ಹೊಸದಾಗಿ ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ಶುಕ್ರವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
ಇಂಡಿಯಾ ಗೇಟ್ ಹುಲ್ಲುಹಾಸುಗಳು ಮತ್ತು ಎರಡು ಕಿಲೋಮೀಟರ್ ಉದ್ದದ ಕರ್ತವ್ಯ ಪಥ್ (ಹಿಂದಿನ ರಾಜಪಥ) ಉದ್ದಕ್ಕೂ ಮಾಡಿದ ಬದಲಾವಣೆಗಳನ್ನು ವೀಕ್ಷಿಸಲು ಜನರು ಹೆಚ್ಚೆಚ್ಚು ಬರುತ್ತಿದ್ದಾರೆ.
ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿ ಮಾಡಿದ ಹಲವು ಬದಲಾವಣೆಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಪ್ರತಿಮೆಯನ್ನು ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
ಗ್ರಾನೈಟ್ ಪ್ರತಿಮೆಯನ್ನು ಇಂಡಿಯಾ ಗೇಟ್ನ ಗ್ರಾಂಡ್ ಕ್ಯಾನೋಪಿ ಅಡಿಯಲ್ಲಿ ಇರಿಸಲಾಗಿದ್ದು, ಇದರ ಜೊತೆ ಬೋಸ್ ಅವರ ಜೀವನ ಮತ್ತು ಪರಂಪರೆಗೆ ಗೌರವ ಸಲ್ಲಿಸಲು ಡ್ರೋನ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಸುಭಾಶ್ಚಂದ್ರ ಬೋಸ್ ಜೀವನ ಆಧರಿಸಿದ ಎಂಟು ರಚನೆಗಳನ್ನು ಒಳಗೊಂಡಿರುವ ಡ್ರೋನ್ ಪ್ರದರ್ಶನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.
ರಚನೆಗಳಲ್ಲಿ ಬೋಸ್ ಅವರ ಭಾವಚಿತ್ರದ ರೂಪರೇಖೆ ಮತ್ತು ಆಜಾದ್ ಹಿಂದ್ ಫೌಜ್ ಧ್ವಜವಿದೆ. ದೆಹಲಿಯ ಐಐಟಿಯಲ್ಲಿ ರೂಪಗೊಂಡ ಬಾಟ್ಲ್ಯಾಬ್ ಡೈನಾಮಿಕ್ಸ್ ಎಂಬ ಸ್ಟಾರ್ಟ್ಅಪ್ ನಿರ್ಮಿಸಿದ ಮತ್ತು ನಿರ್ವಹಿಸುತ್ತಿರುವ ಡ್ರೋನ್ಗಳು ಗಾಳಿಯಲ್ಲಿ ‘ಜೈ ಹಿಂದ್’ ಎಂಬ ಘೋಷಣೆಯನ್ನು ರೂಪಿಸಿರುವುದು ರೋಮಾಂಚಕಾರಿಯಾಗಿದೆ.
ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ, ನಾವು ಮರೆಯುತ್ತಿರುವ ನಾಯಕನಿಗೆ ಇದು ಅತ್ಯಂತ ಅಗತ್ಯವಾದ ಗೌರವವಾಗಿದೆ ಎಂದು ನೆಟ್ಟಿಗರು ಬರೆದಿದ್ದಾರೆ. ಮತ್ತೊಬ್ಬರು ಇದು ನಮಗೆ ಪಟಾಕಿಗಳ ಪರ್ಯಾಯ ಎಂದಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿ, ಒಟ್ಟು 250 ಡ್ರೋನ್ಗಳನ್ನು ಬಳಸಲಾಗಿದೆ. ಡ್ರೋನ್ ಶೋ ನೇತಾಜಿಯವರ ಜೀವನ ಮತ್ತು ಪರಂಪರೆಯನ್ನು ಬಿಂಬಿಸುತ್ತದೆ ಎಂದಿದ್ದಾರೆ.