ಬಸ್ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ದರ ಅಥವಾ ಚಿಲ್ಲರೆ ವಿಷಯದಲ್ಲಿ ಕಂಡಕ್ಟರ್, ಪ್ರಯಾಣಿಕರ ನಡುವೆ ಸಣ್ಣಪುಟ್ಟ ಜಗಳ ನಡೆಯುವುದು ಸಾಮಾನ್ಯ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬಸ್ ಕಂಡಕ್ಟರ್ ಪೂರ್ಣ ಚಾರ್ಜ್ ಕೊಡಿ ಎಂದು ಪ್ರಯಾಣಿಕನನ್ನು ಕೇಳಿದ್ದೇ ತಪ್ಪಾಯ್ತು, ಥಳಿತಕ್ಕೊಳಗಾಗಿದ್ದಾನೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಪ್ರಯಾಣ ದರದ ಬಗ್ಗೆ ವಾದ – ವಿವಾದದ ನಂತರ ಪ್ರಯಾಣಿಕರೊಬ್ಬರು ಬಸ್ ಕಂಡಕ್ಟರ್ಗೆ ಥಳಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎನ್ಸಿಸಿ ಕೆಡೆಟ್ ಆಗಿರುವ ಪ್ರಯಾಣಿಕ ಪೊಲೀಸ್ ಪ್ರಧಾನ ಕಚೇರಿಗೆ ಬೋರ್ಡ್ ಕಚೇರಿಯ ಬಳಿ ಬಸ್ ಹತ್ತಿದ್ದ, ಟಿಕೆಟ್ ದರ 5 ರೂಪಾಯಿ ವ್ಯತ್ಯಾಸದ ಬಗ್ಗೆ ಕಂಡಕ್ಟರ್ ಹಾಗೂ ಆತನ ನಡುವೆ ವಾಗ್ವಾದ ನಡೆಯಿತು. ಪ್ರಯಾಣ ದರ 15 ರೂ. ಇದ್ದು, ಆ ಎನ್ಸಿಸಿ ಕೆಡೆಟ್ ಕಂಡಕ್ಟರ್ಗೆ 10 ಮಾತ್ರ ನೀಡಿ ಅದರಲ್ಲೇ ಕರೆದೊಯ್ಯುವಂತೆ ಒತ್ತಾಯಿಸಿದ್ದ.
ಬಳಿಕ ಜಗಳ ತಾರಕಕ್ಕೆ ಹೋಗಿದ್ದು, ಆ ಎನ್ಸಿಸಿ ಕೆಡೆಟ್ ಕಂಡಕ್ಟರ್ಗೆ ಥಳಿಸಿ, ಚಲಿಸುತ್ತಿದ್ದ ಬಸ್ನಿಂದ ಹಾರಿ ಸ್ಥಳದಿಂದ ಓಡಿ ಹೋಗಿದ್ದಾನೆ. ಬಸ್ ಕಂಡಕ್ಟರ್ನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಈ ಜಗಳದ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಬಸ್ ಸೇವೆಯನ್ನು ನಡೆಸುವ ಸಂಸ್ಥೆಯು ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದೆ. ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಎನ್ಸಿಸಿ ಕೆಡೆಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.