ಉಕ್ರೇನ್‌ನಿಂದ ಯಾವಾಗ ಭಾರತಕ್ಕೆ ಮರಳುತ್ತೇವೆ ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳ ಗುಂಪೊಂದು ರೋಮೇನಿಯಾದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಂದು ಇವರೆಲ್ಲರು ಭಾರತಕ್ಕೆ ಮರಳಲಿದ್ದಾರೆ.
ಯುದ್ಧದಿಂದ ಅಕ್ಷರಶಃ ಕಂಗಾಲಾಗಿರುವ ಉಕ್ರೇನ್‌ನಿಂದ ಸುರಕ್ಷಿತವಾಗಿ ನಮ್ಮ ಮಕ್ಕಳು ಮರಳಿದ್ರೆ ಸಾಕು ಎಂದು ಕಾದು ಕುಳಿತಿರುವ ಪೋಷಕರ ಬಳಿ ಸೇರಲು, ವಿದ್ಯಾರ್ಥಿಗಳು ಸಹ ಕಾತರರಾಗಿದ್ದಾರೆ.
ರೋಮೆನಿಯಾದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, ನಾನು ಮನೆಗೆ ಸುರಕ್ಷಿತವಾಗಿ ಮರಳುತ್ತಿದ್ದೇನೆ. ಹೋದ ತಕ್ಷಣ ಅಮ್ಮನ ಕೈ ಅಡುಗೆ ತಿನ್ನಬೇಕು. ನನ್ನ ಪೋಷಕರು ಹಾಗೂ ಸಂಬಂಧಿಕರಿಗೆ ನಮ್ಮ ಸುರಕ್ಷತೆಯ ಬಗ್ಗೆ ಆತಂಕವಿದೆ. ಅವರಿಗೆ ನಾವು ಅಸುರಕ್ಷಿತ ಸ್ಥಳದಲ್ಲಿದ್ದೇವೆ ಎನ್ನುವ ಭಯವಿದೆ, ಈಗ ನಾವು ಸುರಕ್ಷಿತ ಸ್ಥಳ ತಲುಪಲಿದ್ದೇವೆ ಎಂದಿದ್ದಾರೆ.
WAR BREAKING: ಉಕ್ರೇನ್ ಮನವಿ ತಿರಸ್ಕರಿಸಿದ ನ್ಯಾಟೋ; ಉಕ್ರೇನ್ ಪತನವಾದರೆ ಇಡೀ ಯುರೋಪ್ ಪತನವಾಗತ್ತೆ; ಎಚ್ಚರಿಕೆ ನೀಡಿದ ಝೆಲೆನ್ಸ್ಕಿ
ಈ ಬಗ್ಗೆ ಮಾತನಾಡಿದ ಮತ್ತೊಬ್ಬ ವಿದ್ಯಾರ್ಥಿ ತನ್ನ ಕೈಯ್ಯಲ್ಲಿ ತಿರಂಗಾ ಧ್ವಜ ಹಿಡಿದಿದ್ದರು. ನಾನು ನನ್ನ ಮನೆಗೆ ಹೋಗಿ ಸಾಕಷ್ಟು ದಿನಗಳಾಗಿವೆ. ನನ್ನ ತಂದೆ ತಾಯಿ ಹಾಗೂ ಸಂಬಂಧಿಕರಿಗೆ ನನ್ನ ಸುರಕ್ಷತೆಯ ಬಗ್ಗೆ ಆತಂಕವಿದೆ. ದಿನಕ್ಕೆ ಐವತ್ತು ಬಾರಿ ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಿಸುತ್ತಿರುತ್ತಾರೆ. ನಾನೀಗ ಮನೆಗೆ ಮರಳಲು ಕಾತುರನಾಗಿದ್ದೇನೆ. ಹೋದ ತಕ್ಷಣ ನನ್ನಮ್ಮ ನನ್ನ ಕೆನ್ನೆಗೆ ಹೊಡೆಯುವುದು ಖಚಿತ, ಏಕೆಂದರೆ ಅವರು ಈ ಮೊದಲೆ ಉಕ್ರೇನ್‌ನಿಂದ ಮನೆಗೆ ಮರಳಲು ಹೇಳಿದ್ದರು, ಆದರೆ ನಾನೇ ಅಸಡ್ಡೆ ಮಾಡಿದ್ದೆ ಎಂದಿದ್ದಾನೆ.
ಇದೇ ರೀತಿಯ ವಿಚಾರಗಳನ್ನು ಹಂಚಿಕೊಂಡ ವಿದ್ಯಾರ್ಥಿಗಳು ಉಕ್ರೇನ್‌ನಿಂದ, ರೊಮೇನಿಯಾದತ್ತ ಮರಳಲು ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಆದರೆ ಪೋಲೆಂಡ್ ಗಡಿ ಸೇರಲು ಪ್ರಯತ್ನಿಸಿದ್ದವರಿಗೆ ತೊಂದರೆಯಾಗಿದೆ ಎಂದಿದ್ದಾರೆ. ಆದರೆ ಈಗ ಅಲ್ಲಿಯೂ ಪರಿಸ್ಥಿತಿ ಸುಧಾರಿಸಿದ್ದು ಗಡಿ ದಾಟಲು ಯಾವುದೇ ತೊಂದರೆ ಆಗುತ್ತಿಲ್ಲಾ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.