
ಶಂಕಿತ ಅನ್ಯಗ್ರಹ ಜೀವಿಗಳ ವಿಮಾನವು ಚಲಿಸುತ್ತಿದ್ದು, ಅದರ ದೀಪಗಳ ಮಾತ್ರ ಉರಿಯುತ್ತಿರುವ ದೃಶ್ಯವನ್ನು ಪೈಲಟ್ ವಿಡಿಯೋ ಮಾಡಿದ್ದಾರೆ. ಪೆಸಿಫಿಕ್ ಮಹಾಸಾಗರದ ಮೇಲೆ ದೀಪಗಳು ಮಾತ್ರ ಕಾಣುತ್ತಿದ್ದು, ಅವು ಚಲಿಸುತ್ತಿದೆ. ಆದರೆ, ಇದು ನಿಜವಾಗಿಯೂ ಏಲಿಯನ್ ಗಳದ್ದಾ ಎಂಬ ಬಗ್ಗೆ ಮಾತ್ರ ಇನ್ನೂ ಗೊತ್ತಾಗಿಲ್ಲ.
ಪೈಲಟ್ ಸೆರೆಹಿಡಿದಿರುವ ವಿಡಿಯೋದಲ್ಲಿ, ಮೂರು ಸಾಲುಗಳಲ್ಲಿ ಚಲಿಸುತ್ತಿರುವ ದೀಪಗಳನ್ನು ನೋಡಬಹುದು. ಒಂದರಲ್ಲಿ ನಾಲ್ಕು ಚುಕ್ಕೆಗಳು ಕಂಡು ಬಂದರೆ, ಮತ್ತೆ ಎರಡರಲ್ಲಿ ಮೂರು ಚುಕ್ಕೆಗಳು ಕಂಡು ಬಂದಿವೆ. ವರದಿಗಳ ಪ್ರಕಾರ, ವಿಡಿಯೋವನ್ನು 39,000 ಅಡಿ ಎತ್ತರದಲ್ಲಿ ಚಿತ್ರೀಕರಿಸಲಾಗಿದೆ. ಸ್ವಲ್ಪ ಸಮಯದ ನಂತರ ದೀಪಗಳು ಕಣ್ಮರೆಯಾಗಿದೆ.
ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕುತೂಹಲ ಕೆರಳಿಸಿದೆ. ದೀಪಗಳು ಯುದ್ಧನೌಕೆಯಿಂದ ಹೊಡೆದ ಕ್ಷಿಪಣಿಗಳಾಗಿರಬಹುದು ಅಂತಾ ಕೆಲವರು ಅಂದಾಜಿಸಿದ್ದಾರೆ. ಆದರೆ ಇಲ್ಲಿಯವರೆಗೆ ಅದೇನೆಂಬ ವಿಚಾರ ತಿಳಿಯಲಾಗಿಲ್ಲ.
ಇತ್ತೀಚೆಗೆ, ಪಂಜಾಬ್‌ನ ನಾಗರಿಕರು ರಾತ್ರಿ ವೇಳೆ ಆಕಾಶದಲ್ಲಿ ಪ್ರಕಾಶಮಾನವಾದ ದೀಪಗಳ ನಿಗೂಢ ರೇಖೆಯನ್ನು ನೋಡಿದ್ದಾಗಿ ವರದಿಯಾಗಿತ್ತು. ನಂತರ ಅದನ್ನು ಉಪಗ್ರಹ ಎಂದು ಸ್ಪಷ್ಟಪಡಿಸಲಾಯಿತು.