ನವದೆಹಲಿ: ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ಎಲ್ಲೆಡೆ ವಿಧ ವಿಧ ನಮೂನೆಯ ರಂಗೋಲಿಗಳು ಮನೆಯಂಗಳನ್ನು ತುಂಬಲಿವೆ. ಆದರೆ ಈಗ ವೈರಲ್ ಆಗಿರುವ ರಂಗೋಲಿ ಮಾತ್ರ ಸಾಮಾನ್ಯದ್ದಲ್ಲ. ರಂಗೋಲಿ ಪುಡಿ, ಹೂವು, ವಿವಿಧ ರೀತಿಯ ಬಣ್ಣಗಳನ್ನು ಬಳಸಿ ರಂಗೋಲಿ ಬಿಡಿಸುವುದು ಸಾಮಾನ್ಯ. ಆದರೆ ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿನ ರಂಗೋಲಿ ಬೇರೆಯದ್ದೇ ರೀತಿಯ ವಿಶೇಷತೆ ಹೊಂದಿದೆ.
ಮೊಳೆ ಮತ್ತು ದಾರಗಳಿಂದ ಈ ರಂಗೋಲಿ ಚಿತ್ರೀಕರಿಸಲಾಗಿದೆ. ಮೊಳೆಯನ್ನು ಒಂದು ಮರದ ತುಂಡಿಗೆ ಜೋಡಿಸಿಕೊಂಡು ಉಲ್ಲನ್ ದಾರದಲ್ಲಿ ವಿಧವಿಧ ರೀತಿಯಲ್ಲಿ ಎಳೆಹಾಕಿ ಅದಕ್ಕೊಂದು ಸುಂದರ ರೂಪು ನೀಡುವುದು ಹೊಸತೇನೂ ಅಲ್ಲ, ಇದಾಗಲೇ ಕೆಲವು ಶಾಲಾ-ಕಾಲೇಜುಗಳಲ್ಲಿಯೂ ಮಕ್ಕಳಿಗೆ ಇದನ್ನು ಕಲಿಸಿಕೊಡುತ್ತಾರೆ. ಆದರೆ ದೆಹಲಿಯ ಈ ಮಹಿಳೆ ಹಾಕಿರುವ ಅಪರೂಪದ ಸುಂದರ ಚಿತ್ರ ಮಾತ್ರ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
“ದೆಹಲಿಯ ತಣ್ಣನೆಯ ಮಳೆಯಲ್ಲಿ, ಇದನ್ನು ಪೂರ್ಣಗೊಳಿಸಲು ನನಗೆ ಎರಡು ದಿನಗಳು ಬೇಕಾಯಿತು” ಎಂದು ಮಹಿಳೆ ಹೇಳಿಕೊಂಡಿದ್ದಾರೆ. “ನಾನು ಈ ದೀಪಾವಳಿಗಾಗಿ ಅತಿರಂಜಿತವಾದದ್ದನ್ನು ಹುಡುಕುತ್ತಿದ್ದೆ ಮತ್ತು ಈ ಸ್ಟ್ರಿಂಗ್ ಆರ್ಟ್ ನನ್ನ ಮನ ಗೆದ್ದಿತು. ಅದಕ್ಕಾಗಿ ನಾನು ಇದನ್ನು ಕೈಗೆತ್ತಿಕೊಂಡೆ” ಎಂದು ಮಹಿಳೆ ಹೇಳಿದ್ದಾರೆ. ಈ ಅಪರೂಪದ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಥಹರೇವಾರಿ ಕಮೆಂಟ್ ಮಾಡುತ್ತಿದ್ದಾರೆ.