ಬ್ರೆಜಿಲ್: ಆನಕೊಂಡ ಹಾವುಗಳು ಜನರನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆಯೇ ವಿನಾ ಅವುಗಳು ವಿಷಕಾರಿಯಲ್ಲ. ಹಾಗೆಂದು ಅದನ್ನು ಹಿಡಿದುಕೊಂಡಾಗ ಬುಸುಗುಟ್ಟಿದರೆ ಬೆಚ್ಚಿಬೀಳುವುದು ಗ್ಯಾರಂಟಿ. ವ್ಯಕ್ತಿಯೊಬ್ಬ ಬೃಹದಾಕಾರದ ಆನಕೊಂಡವನ್ನು ಹಿಡಿದುಕೊಂಡು ಅದರಲ್ಲಿ ಹಲವು ಬಾರಿ ಕಚ್ಚಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಬ್ರೆಜಿಲ್ನ ಅಮೆಜಾನ್ ಕಾಡಿನಿಂದ ತಂದ ಆನಕೊಂಡಾವೊಂದನ್ನು ಹಿಡಿದುಕೊಂಡಿರುವ ವ್ಯಕ್ತಿ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ತನ್ನನ್ನು ಪ್ರಾಣಿ ಮತ್ತು ಸರೀಸೃಪ ವ್ಯಸನಿ ಎಂದು ಕರೆದುಕೊಳ್ಳುವ ‘ನಿಕ್‌ಥ್ರಾಂಗ್ಲರ್’ ಈ ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾನೆ. “ನಾಟಿ ಅನಕೊಂಡಾದ ಜತೆ ನಾನು” ಎಂದು ನಿಕ್ ಶೀರ್ಷಿಕೆಯಲ್ಲಿ ಆತ ಹೇಳಿಕೊಂಡಿದ್ದಾನೆ.
ಈ ವಿಡಿಯೊದಲ್ಲಿ ನಿಕ್ ತನ್ನ ಎರಡೂ ತೋಳುಗಳಲ್ಲಿ ಉದ್ರೇಕಗೊಂಡ ಆನಕೊಂಡವನ್ನು ಎತ್ತುಕೊಂಡಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಹಾವು ಈತನ ಹೊಟ್ಟೆ ಮತ್ತು ತೋಳಿನ ಮೇಲೆ ಕಚ್ಚಲು ಪ್ರಾರಂಭಿಸುತ್ತದೆ. ದೊಡ್ಡ ಹಾವು ಕಚ್ಚಿದಾಗ ಅವನು ಕೂಗುತ್ತಾನೆ, ಆದರೆ ಅದು ವಿಷಕಾರಿಯಲ್ಲ ಎಂದು ವೀಕ್ಷಕರಿಗೆ ಹೇಳುತ್ತಾನೆ. ಈ ರೀಲ್ಸ್ ಇದಾಗಲೇ 44 ಮಿಲಿಯನ್ ವೀಕ್ಷಣೆಗಳನ್ನು ಮತ್ತು 4.61 ಲಕ್ಷ ಲೈಕ್ಸ್ಗಳನ್ನು ಗಳಿಸಿದೆ.