ಕೆರಳಿದ ಆನೆಯೊಂದು ತನ್ನ ಮಾವುತನನ್ನು ನೆಲಕ್ಕೆ ಕೆಡವಿದ ಆಘಾತಕಾರಿ ಘಟನೆಯೊಂದು ತ್ರಿಶ್ಯೂರಿನ ತಿರುವಿಲ್ವಾಮಲ ವಿಲ್ವಾದ್ರಿನಾಥ ದೇವಸ್ಥಾನದಲ್ಲಿ ನಡೆದಿದೆ. ನೆಲಕ್ಕೆ ಬಿದ್ದು ಇನ್ನೇನು ಆನೆಯ ಕಾಲ್ತುಳಿತಕ್ಕೆ ಸಿಲುಕುವ ಮುನ್ನ ಕೂದಲೆಳೆ ಅಂತರದಲ್ಲಿ ವ್ಯಕ್ತಿಯು ಪಾರಾಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಡಟ್ಟು ಪರಮು ಅಲಿಯಾಸ್ ಪಣಚೇರಿ ಪರಮೇಶ್ವರಂ ಎಂಬ ಹೆಸರಿನ ಆನೆಯು ಇದಕ್ಕಿದಂತೆಯೇ ಕೆರಳಿತ್ತು. ದೇವಸ್ಥಾನದ ಸಿಬ್ಬಂದಿ ಕುಣಿಸೇರಿ ಸ್ವಾಮಿನಾಥನ್ ಆನೆಯ ಮೇಲೆ ಏರುತ್ತಿದ್ದಂತೆಯೇ ತಲೆ ಅಲುಗಾಡಿಸಿದ ಆನೆಯು ಅವರನ್ನು ನೆಲಕ್ಕೆ ಕೆಡವಿದೆ.
ಬಳಿಕ ಸ್ವಾಮಿನಾಥನ್ ಮೇಲೆ ಆನೆ ದಾಳಿಗೆ ಮುಂದಾಗಿದೆ. ಆದರೆ ಅದೃಷ್ಟವಶಾತ್ ಈ ದಾಳಿಯಿಂದ ಪಾರಾಗುವಲ್ಲಿ ಸ್ವಾಮಿನಾಥನ್ ಯಶಸ್ವಿಯಾಗಿದ್ದಾರೆ. ದೇಗುಲದಲ್ಲಿ ಕಜ್ಜ ಸೀವೆಲಿ ಎಂಬ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೇರಳದ ದೇಗುಲಗಳಲ್ಲಿ ದೈನಂದಿನ ಪ್ರಾರ್ಥನೆಯ ವೇಳೆ ಆನೆಗಳು ಭಾಗಿಯಾಗುವುದು ಸಾಮಾನ್ಯವಾಗಿದೆ.