ನಿಷ್ಕಲ್ಮಷ ಮನಸ್ಸಿನ ಯಾವುದೇ ಪೂರ್ವಾಗ್ರಹವಿಲ್ಲದ ಪುಟ್ಟ ಮಕ್ಕಳ ಸಣ್ಣ ಚಟುವಟಿಕೆಗಳೂ ಮುದ ನೀಡುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ವಿಡಿಯೋ ವೈರಲ್ ಆಗಿದೆ.
ಒಬ್ಬ ಚಿಕ್ಕ ಹುಡುಗ ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕರನ್ನು ಸ್ವಾಗತಿಸುವ ವಿಡಿಯೊವನ್ನು ಆತನ ತಾಯಿ ಕೆಲ್ಲಿ ನೀಲ್ಸನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೀಲ್ 12.1 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 705 ಕೆ ಲೈಕ್ ಪಡೆದು ವೈರಲ್ ಆಗಿದೆ.
ಹೊಂಬಣ್ಣದ ಕೂದಲಿನ 22 ತಿಂಗಳ ಹುಡುಗ ತನ್ನ ಕುಟುಂಬದೊಂದಿಗೆ ವಿಮಾನವನ್ನು ಹತ್ತುತ್ತಿರುವುದನ್ನು ವಿಡಿಯೋದ ಆರಂಭದಲ್ಲಿ ಕಾಣಬಹುದು. ಅವನ ಅಣ್ಣ ತನ್ನ ಮುಂದೆ ಇರುವ ತಮ್ಮ ಆಸನಗಳನ್ನು ಹುಡುಕಲು ಸದ್ದಿಲ್ಲದೆ ನಡೆದುಕೊಂಡು ಹೋಗುತ್ತಿರುವಾಗ, ಈ ಪುಟ್ಟ ಕಂದ ಪ್ರತಿಯೊಬ್ಬ ಪ್ರಯಾಣಿಕರಿಗೆ ಮುದ್ದಾಗಿ ಕೈಬೀಸಿ ಹಾಯ್ ಹೇಳುತ್ತಾ ಸಾಗಿದ್ದಾನೆ. ಮುದ್ದಾದ ಹುಡುಗನ ಶುಭಾಶಯದಿಂದ ಹಿರಿಯರು ಸಂತೋಷಪಟ್ಟರು ಮತ್ತು ನಗುತ್ತಾ ಅವನಿಗೂ ಹಾಯ್ ಹೇಳಿದ್ದಾರೆ.
ವೀಡಿಯೋವನ್ನು ‘ಗುಡ್ ನ್ಯೂಸ್ ಮೂವ್ಮೆಂಟ್’ ಪುಟವು ಹಂಚಿಕೊಂಡಿದೆ, ಅಲ್ಲಿ ಇದು 3 ಮಿಲಿಯನ್ ವೀಕ್ಷಣೆ ಮತ್ತು 215ಕೆ ಲೈಕ್ ಪಡೆದುಕೊಂಡಿದೆ.
ಇದು ಬಹುಶಃ ನಾನು ನೋಡಿದ ಮೋಹಕವಾದ ವೀಡಿಯೊಗಳಲ್ಲಿ ಒಂದಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಆ ಮಗುವಿಗೆ ನನ್ನ ದೊಡ್ಡ ಹಗ್ ಎಂದಿದ್ದಾರೆ.