ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದದ್ದು, ಈ ವೇಳೆ ʼಹರ್ ಘರ್ ತಿರಂಗಾʼ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ನೀರೊಳಗೆ ಧ್ವಜ ಹಾರಿಸಿದ್ದಾರೆ.
“ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯದ ಹಿಂದಿನ ಉದ್ದೇಶ” ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.
75ನೇ ಸ್ವಾತಂತ್ರ್ಯದ ದಿನಾಚರಣೆಯನ್ನು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲರೂ ತಮ್ಮ ಮನೆಗಳ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಬಯಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜುಲೈ 22ರಂದು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.
ಧ್ವಜಗಳ ಉತ್ಪಾದನೆಗೆ ರಾಜ್ಯಗಳು ಸ್ವಸಹಾಯ ಗುಂಪುಗಳನ್ನು ಸಜ್ಜುಗೊಳಿಸಿವೆ ಮತ್ತು ಸ್ಥಳೀಯ ಟೈಲರಿಂಗ್ ಘಟಕಗಳು ಮತ್ತು ಎಂಎಸ್ಎಂಇ ಗಳನ್ನು ಸಹ ನಿಯೋಜಿಸಲಾಗಿದೆ. ಜವಳಿ ಸಚಿವಾಲಯವು ದೊಡ್ಡ ಪ್ರಮಾಣದಲ್ಲಿ ಧ್ವಜಗಳನ್ನು ಪೂರೈಸುವ ಧ್ವಜ ಉತ್ಪಾದಕರನ್ನು ಗುರುತಿಸಿದೆ.
ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳು ಪೂರ್ಣ ಉತ್ಸಾಹದಿಂದ ಪ್ರಚಾರದಲ್ಲಿ ವ್ಯಾಪಕವಾಗಿ ಭಾಗವಹಿಸುತ್ತಿವೆ. ಈ ಅಭಿಯಾನವು ಆಗಸ್ಟ್ 13ರಿಂದ 15 ರವರೆಗೆ ದೇಶಾದ್ಯಂತ ಧ್ವಜಗಳನ್ನು ಹಾರಿಸುವ ಗುರಿಯನ್ನು ಹೊಂದಿದೆ.