ನ್ಯೂಯಾರ್ಕ್: ಮದುವೆ, ಸಂಪ್ರದಾಯ ಎಂದೆಲ್ಲಾ ಬಂದಾಗ ಹಲವರು ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುವುದು ಇದೆ. ವಿದೇಶಿಗರು ಕೂಡ ಭಾರತೀಯ ಸಂಪ್ರದಾಯದ ಪ್ರಕಾರವೇ ಮದುವೆಯಾಗಲು ನೋಡುತ್ತಿರುವುದು ವಿಶೇಷವೇ. ಅದೇ ರೀತಿಯ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಭಾರತೀಯ ವಧುವಿನ ವೇಷ ಧರಿಸಿದ ಅಮೆರಿಕನ್ ಮಹಿಳೆಯ ವಿಡಿಯೋ ಇದಾಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಮೊದಲ ಬಾರಿಗೆ ಲೆಹೆಂಗಾದಲ್ಲಿ ವಧುವನ್ನು ನೋಡಿದ ಅವಳ ಇಡೀ ಕುಟುಂಬದ ಸದಸ್ಯರ ಪ್ರತಿಕ್ರಿಯೆಗಳನ್ನು ಈ ವಿಡಿಯೋದಲ್ಲಿ ಸೆರೆಯಾಗಿದ್ದು, ಅವರ ಭಾವನೆಗಳನ್ನು ವರ್ಣಿಸಲು ಪದಗಳು ಸಾಲದಾಗಿವೆ.
ಮೇಕಪ್ ಕಲಾವಿದೆ ಮತ್ತು ಹೇರ್ ಸ್ಟೈಲಿಸ್ಟ್ ಬಿಯಾಂಕಾ ಲೌಜಾಡೊ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಕೆಂಪು ಬಣ್ಣದ ಲೆಹೆಂಗಾ ಧರಿಸಿ ವಧು ತನ್ನ ಹೋಟೆಲ್ ಕೋಣೆಯಿಂದ ಹೊರಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಲೆಹಂಗಾವನ್ನು ಎರಡು ಕೈಗಳಿಂದ ಸ್ವಲ್ಪ ಮೇಲಕ್ಕೆ ಎಂದರೆ ತನ್ನ ಕಾಲಿನಡಿಗೆ ಸಿಗದೇ ಎತ್ತಿಕೊಂಡು ಹೆಜ್ಜೆ ಹಾಕಿದ ಆ ಕ್ಷಣ ಆಕೆಯ ಕುಟುಂಬದ ಸದಸ್ಯರಿಗೆ ಒಂದು ಸರ್ಪ್ರೈಸ್ ಆಗಿತ್ತು. ಆಕೆಯನ್ನು ನೋಡಿದ ಕುಟುಂಬ ಸದಸ್ಯರು ಚಪ್ಪಾಳೆ ತಟ್ಟಲು ಪ್ರಾರಂಭಿಸುವುದನ್ನು ವಿಡಿಯೋದಲ್ಲಿ ನೋಡಬಹುದು.