ನವದೆಹಲಿ: ಈ ಶೀರ್ಷಿಕೆ ನೋಡಿ ತಬ್ಬಿಬ್ಬಾಗಬಹುದು. ಪಾಕಿಸ್ತಾನದಿಂದ ಭಾರತಕ್ಕೆ ಹೋಗಲು ನಾಲ್ಕು ರೂಪಾಯಿಗಳೇ, ಇದೇನು ಕನಸಿನಲ್ಲಾ ಎಂದು ಕೇಳಬಹುದು. ಆದರೆ ಇದು ಕನಸಲ್ಲ, ನಿಜಕ್ಕೂ ನಾಲ್ಕೇ ನಾಲ್ಕು ರೂಪಾಯಿಗಳು.
ಹಾಗೆಂದು ಅದು ಈಗಿನ ದರವಲ್ಲ. ಇತ್ತೀಚೆಗೆ ಹಳೆಯ ಬಿಲ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಟ್ರೆಂಡ್ ಶುರುವಾಗಿದೆ. ಅದೇ ರೀತಿ 17-09-1947 ರ ಬಿಲ್ ಒಂದು ಈಗ ವೈರಲ್ ಆಗಿದೆ. ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಅಮೃತಸರ ನಡುವೆ ಪ್ರಯಾಣಿಸುವ ಟಿಕೆಟ್ ಇದಾಗಿದ್ದು, ಒಂಬತ್ತು ಮಂದಿಗೆ ಈ ಟಿಕೆಟ್ ನೀಡಲಾಗಿದೆ. ಅದೂ ಎಸಿ-3 ಕೋಚ್ಗೆ ಇಷ್ಟು ಬೆಲೆ !
9 ಮಂದಿಗೆ 36 ರೂಪಾಯಿ 9 ಆಣೆಗಳನ್ನು ವಿಧಿಸಲಾಗಿತ್ತು. ಅದರ ಅರ್ಥ ಒಬ್ಬರಿಗೆ ನಾಲ್ಕು ರೂಪಾಯಿಗಳು ! ಜಾಲತಾಣದಲ್ಲಿ ವೈರಲ್ ಆಗಿರುವ ರೈಲ್ ಟಿಕೆಟ್ ಅನ್ನು ಪಾಕಿಸ್ತಾನ್ ರೈಲ್ ಲವರ್ಸ್ ಹೆಸರಿನ ಪೇಜ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಟಿಕೆಟ್‌ನ ಚಿತ್ರವನ್ನು ಹಂಚಿಕೊಂಡ ಪಾಕಿಸ್ತಾನ್ ರೈಲ್ ಲವರ್ಸ್ ಹೀಗೆ ಬರೆದಿದ್ದಾರೆ.
“ಸ್ವಾತಂತ್ರ್ಯದ ನಂತರ 17-09-1947 ರಲ್ಲಿ 9 ಜನರಿಗೆ, ರಾವಲ್ಪಿಂಡಿಯಿಂದ ಅಮೃತಸರಕ್ಕೆ ಪ್ರಯಾಣಿಸಲು 36 ರೂಪಾಯಿ ಮತ್ತು 9 ಆಣೆ. ರೈಲ್ವೆ ಟಿಕೆಟ್‌ನ ಚಿತ್ರ ಇಲ್ಲಿದೆ. ಬಹುಶಃ ಒಂದು ಕುಟುಂಬ ಭಾರತಕ್ಕೆ ವಲಸೆ ಹೋಗಿರಬಹುದು” ಎಂದು ಬರೆದುಕೊಂಡಿದ್ದಾರೆ.