ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ.
ಕೋಲ್ಕತಾದ ಶೆರ್ವಾನಿ ಕಂಪೆನಿಯು ತಮ್ಮ ಜಾಹೀರಾತನ್ನು ‘ಮಿಸ್ಸಿಂಗ್’ ಕಾಲಮ್‌ನಂತೆ ಮುದ್ರಿಸುವ ಮೂಲಕ ಜನರನ್ನು ಅಚ್ಚರಿಗೊಳಿಸಿದೆ. ಕೋಲ್ಕತ್ತಾದ ಟೆಲಿಗ್ರಾಫ್ ಪತ್ರಿಕೆಯಲ್ಲಿ ಮುದ್ರಿತವಾದ ಜಾಹೀರಾತನ್ನು ‘ಮಿಸ್ಸಿಂಗ್’ ಅಂಕಣ ಎಂದು ಬರೆಯಲಾಗಿತ್ತು, ಅದು ನಂತರ ಸುಲ್ತಾನ್-ದಿ ಕಿಂಗ್ ಆಫ್ ಶೆರ್ವಾನಿಯ ಜಾಹೀರಾತಾಗಿರುವುದು ತಿಳಿದುಬಂದಿದೆ.
ಮುದ್ರಣ ಜಾಹೀರಾತಿನ ಚಿತ್ರವನ್ನು ಬಳಕೆದಾರರು ಜನವರಿ 14 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು 1,620 ಲೈಕ್‌ಗಳು ಮತ್ತು 160 ರಿಟ್ವೀಟ್‌ಗಳನ್ನು ಗಳಿಸಿದೆ. ಮಿಸ್ಸಿಂಗ್ ಕಾಲಮ್ ಸಾಮಾನ್ಯವಾಗಿ ಎಲ್ಲರ ಕಣ್ಣಿಗೆ ಹೋಗುತ್ತದೆ. ಅದರಲ್ಲಿಯೂ ದುಬಾರಿಯ ಶೆರ್ವಾನಿ ತೊಟ್ಟ ಯುವಕ ನಿಂತುಕೊಂಡಿರುವುದನ್ನು ನೋಡಿದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಓದುತ್ತಾರೆ. ಇದೇ ಕಾರಣಕ್ಕೆ ಇಂಥದ್ದೊಂದು ತಂತ್ರವನ್ನು ಮಾಡಿದ್ದಾರೆ.