2016ರಲ್ಲಿ ನೀಲಿ ಕಂಗಳ ಚಹಾ ವ್ಯಾಪಾರಿಯ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪಾಕಿಸ್ತಾನದ ಈ ಯುವಕ ತಮ್ಮ ಆಕರ್ಷಕ ಕಣ್ಣುಗಳ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಜಿಯಾ ಅಲಿ ಎಂಬ ಫೋಟೋಗ್ರಾಫರ್ ಈ ವ್ಯಕ್ತಿಯ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ಫೋಟೋ ಚಹಾ ಮಾರಾಟಗಾರನಿಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಅಂದಹಾಗೆ ಈ ಚಾಯ್ವಾಲಾ ಹೆಸರು ಅರ್ಷದ್ ಖಾನ್ ಎಂದಾಗಿದ್ದು ಇತ್ತೀಚಿಗೆ ಅವರು ಲಂಡನ್ನಲ್ಲಿ ಸ್ವಂತ ಕೆಫೆಯನ್ನು ತೆರೆಯುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಹೌದು.. ! ಅಂದು ತಮ್ಮ ಆಕರ್ಷಕ ಕಣ್ಣಿನಿಂದ ಸೆನ್ಸೇಷನ್ ಸೃಷ್ಟಿಸಿದ್ದ ಅರ್ಷದ್ ಖಾನ್ ಪೂರ್ವ ಲಂಡನ್ನ ಇಲ್ಫೋರ್ಡ್ ಲೇನ್ನಲ್ಲಿ ಕೆಫೆ ಚಾಯವಾಲಾವನ್ನು ತೆರೆದಿದ್ದಾರೆ. ಪೂರ್ವ ಲಂಡನ್ನಲ್ಲಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಜನರು ಹೆಚ್ಚಾಗಿ ವಾಸಿಸುತ್ತಾರೆ. ಈ ಕೆಫೆಯನ್ನು ನೋಡಿದಾಕ್ಷಣ ಇದು ದಕ್ಷಿಣ ಏಷ್ಯಾ ಭಾಗದ ಯಾವುದೋ ಮಾಲೀಕರಿಗೆ ಸೇರಿದ್ದು ಎಂದು ಸುಲಭದಲ್ಲಿ ಹೇಳುವಂತೆ ವಿನ್ಯಾಸಗೊಳಿಸಲಾಗಿದೆ. ಗೋಡೆಗಳಲ್ಲಿ ದೇಸಿ ವರ್ಣಚಿತ್ರಗಳನ್ನು ಬಿಡಿಸಲಾಗಿದೆ.
ಕೆಫೆಯ ಬಗ್ಗೆ ಮಾತನಾಡಿದ ನೀಲಿ ಕಂಗಳ ಚೆಲುವ ಅರ್ಷದ್ ಖಾನ್. ಲಂಡನ್ಗೆ ನಾನು ಭೇಟಿ ನೀಡಿದ್ದಾಗ ಅನೇಕರು ನನಗೆ ಕೆಫೆ ತೆರೆಯುವಂತೆ ಕೇಳಿಕೊಂಡರು. ಅಂತೆಯೇ ನನ್ನ ಮೊದಲ ಅಂತಾರಾಷ್ಟ್ರೀಯ ಚಹಾ ಕೆಫೆಯು ಇಲ್ಬೋರ್ಡ್ ಲೇನ್ನಲ್ಲಿ ತೆರೆಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇಲ್ಲಿ ಪಾಕಿಸ್ತಾನ ಹಾಗೂ ಭಾರತೀಯರೇ ಹೆಚ್ಚಾಗಿ ಇರೋದ್ರಿಂದ ಖಂಡಿತವಾಗಿ ಇಲ್ಲಿ ಚಹಪ್ರಿಯರ ಸಂಖ್ಯೆ ಕೂಡ ಜಾಸ್ತಿ ಇರುತ್ತೆ. ಇದೇ ಕಾರಣಕ್ಕೆ ನಾವು ಈ ಸ್ಥಳವನ್ನು ನಮ್ಮ ಕೆಫೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ.