ಇಂದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂಬ ಭಾವ ಎಲ್ಲೆಡೆ ಇದೆ. ಮೌಲ್ಯಗಳು ಉಳಿಯಬೇಕೆಂದರೆ ಸಾಮಾಜಿಕ ಕಳಕಳಿ, ಪ್ರಜ್ಞೆ ಜಾಗೃತವಾಗಿರಬೇಕು. ಇಂತಹ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ಶಾಲೆಯಲ್ಲಿ ಆದರೆ ಚೆನ್ನ. ಇಂಥದ್ದೊಂದು ಪ್ರಯತ್ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಈಗ ಈ ವೀಡಿಯೋ ಅಪಾರ ಜನ ಮೆಚ್ಚುಗೆ ಗಳಿಸುವುದರೊಂದಿಗೆ ಹಲವರ ಕಣ್ ತೆರೆಸುವ ಕೆಲಸ ಮಾಡುತ್ತಿದೆ.
ಐಎಎಸ್ ಅಧಿಕಾರಿಯಾಗಿರುವ ಮನುಜ್ ಜಿಂದಾಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸುತ್ತಿದ್ದು ಅನೇಕರ ಕಣ್ಣಂಚನ್ನು ತೇವಗೊಳಿಸಿದೆ. ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತರಗತಿಯ ಮಕ್ಕಳಿಗೆ ಒಂದು ಪುಟ್ಟ ನಾಟಕ ಮಾಡಿಸಿ ಆ ಮೂಲಕ ತಾವು ಹೇಗೆ ಅವಶ್ಯಕತೆ ಇರುವ ಮತ್ತೊಬ್ಬರಿಗೆ ನೆರವಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಕೇವಲ ಅಭಿನಯದ ಮೂಲಕ ಕಾಲ್ಪನಿಕವಾಗಿ ಬಸ್ನಲ್ಲಿ ಪ್ರಯಾಣ ಮಾಡುತ್ತಿರುವಂತೆ ಹಾಗೂ ಪ್ರಯಾಣದ ಮಧ್ಯೆ ಹತ್ತುವ ವಯೋವೃದ್ಧ, ಗರ್ಭಿಣಿ ಸ್ತ್ರೀ, ಕೂಸು ಹೊತ್ತ ತಾಯಿ, ಪುಟ್ಟ ಶಾಲಾ ಹುಡುಗಿ ಇಂತಹವರಿಗೆ ಕುಳಿತು ಪ್ರಯಾಣಿಸುತ್ತಿರುವ ಪ್ರಾಯಾಣಿಕರು ತಾವಾಗಿಯೇ ಎದ್ದು ಆಸನ ಬಿಟ್ಟು ಕೊಡುವ ದೃಶ್ಯವನ್ನು ಇಲ್ಲಿ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಸರ್ಕಾರಿ ಶಾಲೆಯ ಈ ಶಿಕ್ಷಕರ ಸೃಜನಶೀಲತೆ ಹಾಗೂ ಸಾಮಾಜಿಕ ಕಳಕಳಿಯನ್ನು ಮಕ್ಕಳಲ್ಲಿ ಬಿತ್ತುವ ಪ್ರಯತ್ನಕ್ಕೆ ಶ್ಲಾಘನೆ ಸೂಚಿಸಿದ್ದಾರೆ ಐಎಎಸ್ ಅಧಿಕಾರಿ ಮನುಜ್ ಜಿಂದಾಲ್. ಇನ್ನಾದರೂ ಇಂತಹ ವೀಡಿಯೋಗಳಿಂದ ಸಮಾಜ ತನ್ನ ಕರ್ತವ್ಯವನ್ನು ಮೆರೆಯಲಿ ಎಂಬ ಆಶಯವಷ್ಟೇ.